Dr N B Shridhar
Contact information, map and directions, contact form, opening hours, services, ratings, photos, videos and announcements from Dr N B Shridhar, Scientist, # D-20, Sankula, Beside Jeevanasanje Vruddhashrama, Swamy Vivekananda extn. , Gadikoppa, Shivamogga-577205, Shimoga.
ಆಕಾಂಕ್ಷಿಗಳೇ,
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ೨೫೦ ಕಿರಿಯ ಪಶುವೈದ್ಯಕೀಯ ಪರೀಕ್ಷಕರ (ಪಶುವೈದ್ಯಕೀಯ ಸಹಾಯಕರು) ಹುದ್ದೆಗಳ ನೇರನೇಮಕಾತಿಗಾಗಿ ಅರ್ಜಿ ಕರೆದಿದ್ದು (ಅಧಿಸೂಚನೆ ಸಂಖ್ಯೆಇಡಿ/ ಕೆಇಎ/ಆಡಳಿತ/ಸಿ.ಆರ್-೦೮/೨೦೨೨-೨೩ (ಮಾವೃ) ದಿನಾಂಕ ೨೩-೯-೨೦೨೨), ಈ ಕುರಿತು ನಡೆಸುವ ೧೦೦ ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಆನ್ಲೈನ್ ಮೂಲಕ ತರಬೇತಿ ನಡೆಸಲು ಯೋಜಿಸಲಾಗಿದೆ. ಈ ಕುರಿತು ಪರೀಕ್ಷೆಯ ದಿನಾಂಕವು ಇನ್ನೂ ಘೋಷಣೆಯಾಗಬೇಕಿದ್ದು ಜನವರಿ ೨೦೨೩ ರಲ್ಲಿ ನಡೆಯುವ ನಿರೀಕ್ಷೆ ಇದೆ.
ಈ ತರಬೇತಿಯನ್ನು ದಿನಾ೦ಕ ೧-೧೨-೨೦೨೨ (ಸಂಜೆ ೭-೮ ಗಂಟೆಗೆ ) ರಿಂದ ಆನ್ಲೈನ್ ಮೂಲಕ ಕನ್ನಡ ಭಾಷೆಯಲ್ಲಿ ನಡೆಸಲು ಯೋಜಿಸಲಾಗಿದ್ದು ಇದಕ್ಕೆ ನಾಮಮಾತ್ರ ಶುಲ್ಕ ವಿಧಿಸಲು ಯೋಜಿಸಲಾಗಿದೆ. ಆಸಕ್ತರು ಇಲ್ಲಿ ಲಗತ್ತಿಸಿದ ಗೂಗಲ್ ಫಾರ್ಮ್ ಅರ್ಜಿಯನ್ನು ಭರ್ತಿಮಾಡಿ ದಿನಾಂಕ ೧೫-೧೧-೨೦೨೨ ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು, ರೈತರು, ಪ್ರಾಣಿಪ್ರಿಯರು ಹಾಗು ವಿಜ್ಞಾನದಲ್ಲಿ ಆಸಕ್ತರು ಭಾಗವಹಿಸಬಹುದಾಗಿದೆ. ಇದರಲ್ಲಿ ೧೦೦ ಜನಕ್ಕೆ ಸೀಮಿತವಾಗಿ ಮೊದಲ ೧೦೦ ಅರ್ಜಿಗಳನ್ನು ಮಾತ್ರ ಮೊದಲು ಬಂದವರಿಗೆ ಮೊದಲ ಆಧ್ಯತೆಯಲ್ಲಿ ಪರಿಗಣಿಸಲಾಗುವುದು.
ಈ ತರಬೇತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸಿದಂತೆ ಈ ಕೆಳಗಿನ ಪಠ್ಯವನ್ನು ವಿವರವಾಗಿ ಬೋಧಿಸಲಾಗುವುದು ಹಾಗೂ ಅವಶ್ಯಕ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೋಂದಣಿ ಮಾಡಿದವರಿಗೆ ಕಳಿಸಲಾಗುವುದು.
ಅಧ್ಯಾಯ ೧: ಪಶುವೈದ್ಯಕೀಯ ವಿಜ್ಞಾನ
೧.ಪ್ರಾಣಿ ಶರೀರ ರಚನೆ ಮತ್ತು ಕ್ರಿಯಾಶಾಸ್ತ್ರ
೨.ಪ್ರಾಥಮಿಕ ಪ್ರಯೋಗಾಲಯ ತಂತ್ರಗಳು ಹಾಗೂ ಔಷಧೀಯ ತಯಾರಿಕಾ ಸೂತ್ರಗಳು
೩. ಪಶು ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ
೪. ಜಾನುವಾರು ಕಾಯಿಲೆಗಳು ಹಾಗೂ ಲಸಿಕೆಗಳು
೫.ಜಾನುವಾರುಗಳಲ್ಲಿ ಸಂತಾನೋತ್ಪತ್ತಿ ಮತ್ತು ಕೃತಕ ಗರ್ಭಧಾರಣೆ
ಅಧ್ಯಾಯ ೨: ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆಯ ಮೂಲಭೂತ ಅಂಶಗಳು
೧.ನಿರ್ವಹಣೆಯ ಮೂಲಭೂತ ಅಂಶಗಳು
೨. ಪಶು ಆಹಾರದ ಮೂಲಭೂತ ಅಂಶಗಳು
೩. ಹೈನುರಾಸುಗಳ ಪಾಲನೆ ಮತ್ತು ಪೋಷಣೆ
೪. ಮಾಂಸ ಪ್ರಾಣಿಗಳ ನಿರ್ವಹಣೆ (ಕುರಿ, ಆಡು, ಹಂದಿ, ಮೊಲ) ಮತ್ತು ಮಾಂಸ ಉತ್ಪಾದನೆ
೫. ಮೇವು ಉತ್ಪಾದನೆ ಮತ್ತು ನಿರ್ವಹಣೆ
೬. ಕುಕ್ಕುಟ/ಕೋಳಿಪಾಲನೆ
ಮೊಟ್ಟೆಗಳಿಂದ ಮರಿಮಾಡುವಿಕೆ
ಅಧ್ಯಾಯ ೩: ಇತರೆ ಪಠ್ಯಕ್ರಮ
೧.ಪಶುಪಾಲನೆ ವಿಸ್ತರಣೆ ಶಿಕ್ಷಣದ ಮೂಲ ಅಂಶಗಳು
೨.ಪಶುಸಂಗೋಪನೆ ಸ್ಥಿತಿಗತಿ
೩. ಮುದ್ದು ಪ್ರಾಣಿಗಳು ಮತ್ತು ಮೃಗಾಲಯ ಪ್ರಾಣಿಗಳು
ಈ ಕುರಿತು ಅರ್ಜಿ ಹಾಕಲು ಗೂಗಲ್ ಫಾರ್ಮ್ ಲಿಂಕ್ ಈ ಮುಂದಿನಂತಿದೆ.
https://docs.google.com/forms/d/e/1FAIpQLSeh_moJVlx4Y_cDf7ugJdqBYT8djt4kLhhiMfA9ug-xXdtkJA/viewform?usp=sf_link
ತರಬೇತಿ ನೀಡುವವರು
ಡಾ: ಎನ್ ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಆತ್ಮೀಯ ವಿದ್ಯಾರ್ಥಿಗಳೇ/ಸ್ನೇಹಿತರೇ,
ಪಶುವೈದ್ಯಕೀಯ ಸ್ನಾತಕಪೂರ್ವ ಪದವಿಯ ಮೊದಲ ವರ್ಷದಲ್ಲಿ ಕನ್ನಡವನ್ನು ಒಂದು ಪಠ್ಯವಾಗಿ ವಿಶ್ವವಿದ್ಯಾಲಯ ನಿಗದಿಪಡಿಸಿದೆ. ಇದಕ್ಕೆ ಸಂಬಂಧಿಸಿದ ಬೋಧಕರಲ್ಲಿ ನಾನೂ ಒಬ್ಬ. ಈವತ್ತು ಆನ್ಲೈನ್ ಮೂಲಕ ದಾಸ ಪರಂಪರೆಯ ಶ್ರೇಷ್ಟರಾದ "ಪುರಂದರ ದಾಸರು ಮತ್ತು ಅವರ ಕೀರ್ತನೆಗಳು" ಈ ಕುರಿತು ಪಾಠ ಮಾಡಿದೆ. ಇದರ ಯುಟ್ಯೂಬ್ ಕೊಂಡಿ ಇಲ್ಲಿದೆ. ಕೇಳಿ ನೋಡಿ !! ಸುಧಾರಣೆಗಾಗಿ ಸಲಹೆ ಸೂಚನೆ ನೀಡಿ.
https://youtu.be/N0nZIu1dZEM
ಡಾ: ಎನ್.ಬಿ.ಶ್ರೀಧರ
ಪುರಂದರದಾಸರ ಕೀರ್ತನೆಗಳು ಡಾ: ಎನ್.ಬಿ.ಶ್ರೀಧರ PURANDHARA DASARA KEERTHANEGALU KANNADA TALK BY DR SHRIDHAR ಪುರಂದರದಾಸರ ಕೀರ್ತನೆಗಳು ಡಾ: ಎನ್.ಬಿ.ಶ್ರೀಧರPURANDHARA DASARA KEERTHANEGALU KANNADA TALK BY DR SHRIDHARJoin this channel to get access to perks:https://www.youtub...
ಸಾಕು ನಾಯಿ ಸಚಿತ್ರ ಕೈಪಿಡಿ
ಇದು ನಾನು ಮತ್ತು ಖ್ಯಾತ ಶ್ವಾನತಜ್ಞ ಡಾ: ಸಿ.ಎಸ್ ಅರುಣ್ ಜೊತೆಗೂಡಿ ಬರೆದ ಶ್ವಾನಗಳ ಬಗ್ಗೆ ಸರಳ ಕನ್ನಡದಲ್ಲಿ ಬರೆದ ಪುಸ್ತಕ. ನವಕರ್ನಾಟಕ ಪಬ್ಲಿಕೇಶನ್ಸ್, ಬೆಂಗಳೂರು ಇವರು ೨೦೨೦ ನೇ ಸಾಲಿನಲ್ಲಿ ಪ್ರಕಟಿಸಿದ ಪುಸ್ತಕ.
ಇದರ ಬಗ್ಗೆ ಇಲ್ಲೊಂದು ಕಿರು ವಿಮರ್ಷೆಯಿದೆ. ವಿಮರ್ಷೆ ಮಾಡಿದವರು MyLang Books Digital ಮೈಲ್ಯಾಂಗ್ ಬುಕ್ಸ್ ಡಿಜಿಟಲ್ (https://www.facebook.com/watch/MyLangBooks/)
ಮೈಲ್ಯಾಲಾಂಗ್ ಬುಕ್ಸ್ ಡಿಜಿಟಲ್ ಇದರ ಆಪ್‍ನಲ್ಲಿ ಓದಬಹುದು.
ಪುಸ್ತಕದ ಬೆಲೆ: ರೂ: ೯೦
ಕೊಂಡಿ:
https://mylang.in/products/saaku-naayi-inr...
ಇದರ ವಿಮರ್ಷೆ ಯುಟ್ಯೂಬ್ನಲ್ಲಿಯೂ ಸಹ ಲಭ್ಯನ್
ಲಿಂಕ್: https://youtu.be/atXlAXBmIw0
ಈ ಪುಸ್ತಕ ಈ ಕೆಳಗೆ ನಮೂದಿಸಿದ ಲಿಂಕುಗಳಲ್ಲಿ ಲಭ್ಯ:
೧) ನವಕರ್ನಾಟಕ ಪಬ್ಲಿಕೇಶನ್ಸ್ ಅವರ ಈ ಕೊಂಡಿಯಲ್ಲಿ ಲಭ್ಯ;
http://www.navakarnatakaonline.com/saaku-naayi-dog-care...
೨) ಸಪ್ನಾ ಬುಕ್ ಹೌಸ್ ಬೆಂಗಳೂರು https://www.sapnaonline.com/.../saaku-naayi-sachitra...
೩) ಆಮೆಜ಼ಾನ್ https://www.amazon.in/Nayi.../dp/B07JN8736M/ref=sr_1_3...
೪) ಪ್ಲಿಪ್ ಕಾರ್ಟ್ https://www.flipkart.com/nayi.../p/itm0ffdecbbed248...
ದಯವಿಟ್ಟು ಪಡೆದು ಓದಿ..
ಡಾ:ಎನ್.ಬಿ.ಶ್ರೀಧರ
ಡಾಸಿ.ಎಸ್.ಅರುಣ
ಸಾಕು ನಾಯಿ ( ಸಚಿತ್ರ ಕೈಪಿಡಿ ) : ಮೈಲ್ಯಾಂಗ್ ಪುಸ್ತಕ ಪರಿಚಯ
ಬರಹಗಾರರು :
ಡಾ|| ಎನ್. ಬಿ. ಶ್ರೀಧರ್,
ಡಾ|| ಅರುಣ್ ಸಿ ಎಸ್
ಪುಟಗಳು: 96
ನಾನು ನಾಯಿ. ನೀವೀಗ ಓದುತ್ತಿರುವುದು ಶ್ವಾನ ಪುರಾಣ. ಸಾವಿರಾರು ವರ್ಷಗಳ ಹಿಂದೆ ವಿಕಸನಗೊಂಡು ಆದಿಮಾನವರ ಸಂಗಾತಿಯಾಗಿ ಜೊತೆಗೂಡಿದ ನಾನು ಇಂದಿಗೂ ಜನಪ್ರಿಯ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ನನ್ನ ಕಂಡರೆ ಇಷ್ಟ. ಆದರೆ ಕೆಲವರಿಗೆ ಭಯ, ಇನ್ನು ಹಲವರಿಗೆ ತಿರಸ್ಕಾರ. ಇರಲಿ, ನನಗೇನೂ ಬೇಸರವಿಲ್ಲ. ನನ್ನ ನಿಷ್ಠೆ ನನ್ನ ಯಜಮಾನನಿಗೇ. ನಿಮಗೇ ಗೊತ್ತಲ್ಲ, ನಂಬಿಕೆ, ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ! ಹಾಗಾಗಿ ಇಂದು ನನ್ನನ್ನು ಪಾಲಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಶ್ವದಲ್ಲಿಂದು ನಮ್ಮ ಜನಸಂಖ್ಯೆ ತೊಂಬತ್ತು ಕೋಟಿ. ನಮ್ಮ ದೇಶದಲ್ಲಿ ನಾಲ್ಕು ಕೋಟಿ. ನಿಮ್ಮ ಕುಟುಂಬದ ಸದಸ್ಯನೇ ಆಗಿಬಿಡುವ ನನ್ನ ಪಾಲನೆ-ಪೋಷಣೆ ಅಷ್ಟು ಸುಲಭವಲ್ಲ ಮಾರಾಯ್ರೆ! ಅದರಲ್ಲಿ ನಿಮಗೆ ಎದುರಾಗಬಹುದಾದ ಸಮಸ್ಯೆಗಳು ಅನೇಕ. ಅವುಗಳ ಸೂಕ್ತ ಪರಿಹಾರಕ್ಕಾಗಿ ನೀವು ಓದಲೇಬೇಕಾದ ಹೊತ್ತಿಗೆ ಇದು. ಅನುಭವಿ ಪಶುವೈದ್ಯದ್ವಯರು ಬರೆದ ಈ ಪುಸ್ತಕದಲ್ಲಿ ನನ್ನ ತಳಿಯ ಆಯ್ಕೆ, ಆಹಾರ, ತರಬೇತಿ, ರೋಗ ನಿವಾರಣೆ, ಸಂತಾನಾಭಿವೃದ್ಧಿ, ತುರ್ತು ಚಿಕಿತ್ಸೆ, ತೋರ್ಕೆ ಮುಂತಾದ ವಿಷಯಗಳ ಬಗ್ಗೆ ಲೇಖಕರು ಸರಳವಾಗಿ ವಿವರಿಸಿದ್ದಾರೆ. ನನ್ನ, ನಿಮ್ಮ ಮಧ್ಯೆ ಮಧುರ ಬಾಂಧವ್ಯವನ್ನು ಪೋಷಿಸಿ ಬೆಳೆಸುವುದರಲ್ಲಿ ಈ ಪುಸ್ತಕ ನಿಮಗೆ ಉತ್ತಮ ದಾರಿದೀಪವಾಗುವುದು ಖಂಡಿತ. ಬನ್ನಿ, ನೀವೂ ಓದಿ, ನಿಮ್ಮ ಗೆಳೆಯರಿಗೂ ಕೊಟ್ಟು ಓದಿಸಿ.
ಡಾ:ಎನ್.ಬಿ.ಶ್ರೀಧರ
https://fb.watch/6yKkP8UteM/ https://youtu.be/atXlAXBmIw0
ಸಾಕು ನಾಯಿ ( ಸಚಿತ್ರ ಕೈಪಿಡಿ ) : ಮೈಲ್ಯಾಂಗ್ ಪುಸ್ತಕ ಪರಿಚಯ https://mylang.in/products/saaku-naayi-inrಬರಹಗಾರರು : ಡಾ|| ಎನ್. ಬಿ. ಶ್ರೀಧರ್ಡಾ|| ಅರುಣ್ ಸಿ ಎಸ್ಪುಟಗಳು: 96ನಾನು ನಾಯಿ. ನೀವೀಗ ಓದುತ್ತಿರುವುದು ಶ್ವಾನ ಪುರಾಣ. ಸ...
ರಾಷ್ಟ್ರೀಯ ವೈದ್ಯರ ದಿನ ಮತ್ತು ಡಾ: ಬಿ ಎಂ. ಹೆಗಡೆಯವರ ಮಾತುಗಳು !!
--
ಈ ದಿನ ರಾಷ್ಟ್ರೀಯ ವೈದ್ಯರ ದಿನ! ಭಾರತೀಯ ವೈದ್ಯಕೀಯ ಪರಿಷತ್ತಿನವರು ಪ್ರತಿ ವರ್ಷ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸುತ್ತಾರೆ. ಇದು ವೈದ್ಯಕೀಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ: ಬಿ.ಸಿ. ರಾಯ್ ಜನ್ಮ ದಿನವೂ ಸಹ ಹೌದು. ಇದೇ ದಿನ ರಾಷ್ಟ್ರೀಯ ಅಂಚೆ ಕೆಲಸಗಾರರ ದಿನ, ರಾಷ್ಟ್ರೀಯ ಲೆಕ್ಕ ತಪಾಸಣಾಗಾರರ ದಿನ, ರಾಷ್ಟ್ರೀಯ ಜಿ ಎಸ್ ಟಿ ದಿನ ಕಾಕತಾಳೀಯವೆಂಬಂತೆ ಇದೇ ದಿನ ಅಂತರಾಷ್ಟ್ರೀಯ ಹಾಸ್ಯ ದಿನವೂ ಹೌದು !. ಅದಕ್ಕೆಂದೇ ಡಾ: ಬಿ ಎಂ ಹೆಗಡೆಯವರು ಇಡೀ ವೈದ್ಯ ಕುಲವನ್ನು ಹಾಸ್ಯ ಮಾಡುವ ದಿನವೂ ಹೌದು !
ವೃತ್ತಿಪರ ವೈದ್ಯರೆಲ್ಲರಿಗೂ ಸಹ ಅನೇಕ ಹಿತೈಶಿಗಳಿಂದ ಶುಭಸೂಚಕ ಸಂದೇಶಗಳು ಬರುತ್ತಿವೆ. ಯಾಕೋ ಡಾ: ಬಿ ಎಂ ಹೆಗಡೆಯವರು ಪ್ರತಿ ಮಾತು ಮಾತಿಗೂ ಹೇಳುವ ಮಂತ್ರ “ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|ಯಮಸ್ತು ಹರತಿ ಪ್ರಾಣಾನ್ ವೈದ್ಯಯೋ ಪ್ರಾಣಾನ್ ಧನಾತಿಚ|” ಅಂದರೆ " ಯಮರಾಜ ಸಹೋದರನಾದ ಓ ವೈದ್ಯರಾಜನೇ, ನಿನಗೆ ನಮಸ್ಕಾರ. ಯಮ ಪ್ರಾಣವನ್ನು ಮಾತ್ರ ಕಿತ್ತುಕೊಳ್ಳುತ್ತಾನೆ. ವೈದ್ಯ ಪ್ರಾಣದೊಂದಿಗೆ ಹಣವನ್ನೂ ಕಿತ್ತುಕೊಳ್ಳುತ್ತಾನೆ". ಇದರೊಂದಿಗೇ ಅವರ ಭಾಷಣ ಪ್ರಾರಂಭ !!
ತಮಗಾದ ಒಂದಿಷ್ಟು ಕಹಿ ಅನುಭವವನ್ನು ಆಧರಿಸಿ ಇಡೀ ಆಧುನಿಕ ವೈದ್ಯಕೀಯ ವಿಜ್ಞಾನ ವ್ಯವಸ್ಥೆಯನ್ನೇ ಅತ್ಯಂತ ಹೀನಾಯವಾಗಿ ತೆಗಳುವ ಜನಕ್ಕೆ ಈ ಶುಭಾಷಿತ ವೇದ ವಾಕ್ಯವೇ ಆಗಿದೆ !. ಇದನ್ನೇ ಹೆಗಡೆಯವರು ಮೇಲಿಂದ ಮೇಲೆ ಉಲ್ಲೇಖಿಸಿ ಸಾರಾಸಗಾಟವಾಗಿ ಇಡೀ ವೈದ್ಯ ಕುಲವನ್ನು ಬಾಯಿಗೆ ಬಂದಂತೆ ದೂಷಿಸುವುದು ! ಆದರೂ ವೈದ್ಯ ಕುಲದ ಯಾರೂ ಇದಕ್ಕೆ ಸ್ಪಂಧಿಸದೇ ದಿವ್ಯನಿರ್ಲಕ್ಷ್ಯ ತೋರಿರುವುದು ಒಂಥರಾ ಸರಿಯೋ ತಪ್ಪೋ ಗೊತ್ತಾಗದೇ ಗೋಜಲಾಗಿದೆ !.
ಒಂದಿಷ್ಟು ಜನ ವೈದ್ಯರು ಹಣಬಾಕರಾದರೆ, ಬ್ರಷ್ಟರಾದರೆ, ಹಣ ಪಿಪಾಸುಗಳಾದರೆ ಇಡೀ ವೈದ್ಯಕುಲವನ್ನೇ ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ವೈದ್ಯೋ ನಾರಾಯಣೋ ಹರಿ:" ಎಂಬ ಮಾತಿನ ಬಗ್ಗೆ ಇವರದು ಜಾಣಕಿವುಡು! ರೋಗಿಗಳನ್ನೇ ದೇವರೆಂದು ತಿಳಿದು ಹಗಲು ರಾತ್ರಿ ಅವರ ಸೇವೆಯನ್ನೇ ಪ್ರಾಣದ ಹಂಗು ತೊರೆದು ದೇವರ ಸೇವೆಯೆಂದು ಮಾಡುವ ವೈದ್ಯರಿಲ್ಲವೇ? ಇವರ ಸಂಖ್ಯೇನು ಕಡಿಮೆಯೇ?
“ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ|ಔಷದಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ|” ಇದರರ್ಥ "ಶರೀರವು ತೀವ್ರ ಕಾಯಿಲೆಯಿಂದ ಶವದಂತೆ ಕೃಶವಾಗಿ ಹೋದಾಗ, ಬೇರಾವ ಔಷಧಿಯೂ ಕೆಲಸ ಮಾಡದಿದ್ದಾಗ ಉಳಿದಿರುವ ಔಷಧ ಗಂಗಾಜಲವೊಂದೇ, ಯಾವ ವೈದ್ಯನೂ ಗುಣಪಡಿಸಲು ಸಾಧ್ಯವಿಲ್ಲದಿರುವಾಗ ಮುಕ್ತಿಯನ್ನು ಕೊಡಲು ಉಳಿದಿರುವ ಶ್ರೀಮನ್ನಾರಾಯಣನಾದ ಹರಿಯೆಂಬ ವೈದ್ಯನೊಬ್ಬನೇ" ಎಂದು ಕೈಚೆಲ್ಲುವಾಗ ಹುಟ್ಟಿದ ಶುಭಾಷಿತ ಇದು. ಇದರ ಬಗ್ಗೆ ಸಾಹೇಬರದ್ದು ಜಾಣಕಿವುಡು! ರೋಗಿಗಳನ್ನೇ ದೇವರೆಂದು ತಿಳಿದು ಹಗಲು ರಾತ್ರಿ ಅವರ ಸೇವೆಯನ್ನೇ ಪ್ರಾಣದ ಹಂಗು ತೊರೆದು ದೇವರ ಸೇವೆಯೆಂದು ಮಾಡುವ ವೈದ್ಯರಿಲ್ಲವೇ? ಇವರ ಸಂಖ್ಯೇನು ಕಡಿಮೆಯೇ?
ನಿಜ. ಅವರ ಪರ ಮತ್ತು ವಿರೋಧದ ಅನೇಕ ಚರ್ಚೆಗಳು ನಡೆಯುತ್ತಿವೆ. ಅವರು ಆಧುನಿಕ ವೈದ್ಯತಿಯನ್ನು ಸಾರಾಸಾಗಾಟಾಗಿ ಪಕ್ಕಾ ದುಡ್ಡು ಮಾಡುವ ದಂಧೆಯೆಂದು ಕರೆಯುವುದು ಅನೇಕರಿಗೆ ಅಪ್ಯಾಯಮಾನವಾಗಿ ಕಂಡರೆ ಇನ್ನು ಆಧುನಿಕ ವೈದ್ಯಕೀಯ ವಿಜ್ಞಾನ ನಂಬುವವರಿಗೆ ತಲೆ ಕೆಟ್ಟ ಮುದುಕನಂತೆ ಗೋಚರಿಸುತ್ತಾರೆ. ಅವರು ಹೇಳುವುದು ಅರ್ಧ ಸತ್ಯ ಮಾತ್ರ. ತಾಂತ್ರಿಕ ಶಬ್ಧಗಳನ್ನು ಸರಳಗೊಳಿಸಿ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಯಪಡಿಸಿ ಉಳಿದೆಲ್ಲವನ್ನು ಮೂಢನಂಬಿಕೆಯ ಆಸುಪಾಸು ಒಯ್ಯುವುದು ಅವರ ಹವ್ಯಾಸ. ಪದ್ಮಭೂಷಣ, ಹೃದಯ ತಜ್ಜ, ವಿದೇಶದಲ್ಲಿ ಓದಿರುವವರು, ವಿಶ್ವವಿದ್ಯಾಲಯವೊಂದರ ಮಾಜಿ ಕುಲಪತಿಗಳು ಎಂಬೆಲ್ಲಾ ವಿಶೇಷಣಗಳಿರುವುದರಿಂದ ಅವರ ಮಾತಿಗೆ ಬಹಳ ಬೆಲೆ. ಲಕ್ಷಾಂತರ ಅಭಿಮಾನಿಗಳನ್ನು ಮತ್ತು ಆರಾಧಕರನ್ನು ಹೊಂದಿರುವುದು ಇವರ ಹೆಗ್ಗಳಿಕೆ. ಇವರ ಮಾತಿಗೆ ಅದರದೇ ಆದ ತೂಕವಿದೆ !
ಆಧುನಿಕ ವೈದ್ಯಕೀಯ ವಿಜ್ಞಾನದ ಪದವಿ ಸಿಗುವುದು ದುಡ್ಡಿದ್ದವರಿಗೆ ಮಾತ್ರ, ಸ್ನಾತಕ ಪದವಿಗೆ ಒಂದು ಕೋಟಿ, ಸ್ನಾತಕೋತ್ತರ ಪದವಿಗೆ ಹತ್ತಾರು ಕೋಟಿ ನೀಡಿ ಪ್ರವೇಶ ಪಡೆದು ನಂತರ ಪದವಿ ಪಡೆದವರು "ಸೇವೆ" ಮಾಡಲು ಹೇಗೆ ಸಾಧ್ಯ ?. ಸೇವೆ ವ್ಯಾಪಾರವಾದಾಗ, ಹಾಕಿದ ಬಂಡವಾಳ ವಾಪಸ್ಸು ಪಡೆಯಲು ನಿಂತಾಗ ವಂಚನೆಯೂ ಜೊತೆಯೇ ಬರುತ್ತದೆ.!. ಈ ವ್ಯವಸ್ಥೆ ಬರಲು ಕಾರಣದ ಮೂಲ ಹುಡುಕಲು ಯಾರು ಹೋಗಿದ್ದಾರೆ.
ಹೆಗಡೆಯಂತಹ ಅತ್ಯಂತ ಗಣ್ಯರು, ಅದೂ ಅವರೇ ಕುಲಪತಿಗಳಾದ ಅಕಾಡೆಮಿಯಲ್ಲೇ ಈ ಕ್ಯಾಪಿಟೇಶನ್ ಹಾವಳಿ ತಡೆದು ಬಡವರಿಗೆ ವೈದ್ಯಕೀಯ ಶಿಕ್ಷಣ ದಾನ ಮಾಡಿ ತಾವೇ ದೇಶಕ್ಕೆ ಮಾದರಿಯಾಗಿ ಉಪದೇಶ ಮಾಡಬಹುದಿತ್ತಲ್ಲ? ವೈದ್ಯಕೀಯ ವೃತ್ತಿಯನ್ನು ಹಿಗ್ಗಾ ಮುಗ್ಗಾ ಟೀಕಿಸುವ ಭರದಲ್ಲಿ ಹೆಗಡೆಯವರು ಅವರು ಧನದಾಹಿಗಳಾಗಲು ಕಾರಣವಾದ ವ್ಯವಸ್ಥೆಯ ಬಗ್ಗೆ ಮರೆತು ಜಾಣ ಕುರುಡು ಪ್ರದರ್ಶಿಸುತ್ತಾರೆ !!. ಪದ್ಮವಿಭೂಷಣದಂತ ಉನ್ನತ ಗೌರವ ಪಡೆದ ಅವರು ಶಿಕ್ಷಣದಲ್ಲಿ ಬೃಹತ್ ಆಗಿ ಆಳವಾಗಿ ಬೇರು ಬಿಟ್ಟಿರುವ ಕ್ಯಾಪಿಟೇಶನ್ ಲಾಬಿಯನ್ನು ತಡೆಯಬಹುದಿತ್ತಲ್ಲ! ವೃತ್ತಿಯಲ್ಲಿದ್ದಾಗ ಯಾರವಿರುದ್ಧವೂ ತುಟಿ ಪಿಟಕ್ ಎನ್ನದ ಇವರು ನಿವೃತ್ತಿಯಾದ ಕೂಡಲೇ ಭಾರತೀಯ ವೈದ್ಯಕೀಯ ಪರಿಷತ್ತು ಇತ್ಯಾದಿಗಳು ರಹದಾರಿಯನ್ನು ರದ್ದು ಮಾಡುವಂತಹ ವೈದ್ಯಕೀಯ ವೃತ್ತಿಗೆ ಕೈ ಹಾಕಿರುವುದು ಇವರ ಜನಪ್ರಿಯತೆಯ ಹಪಹಪಿಕೆ ಮನ್ನಣೆಯ ದಾಹದ ಒಂದು ಮುಖ ಅಷ್ಟೇ !
ವೈದ್ಯಕೀಯ ಸೇವೆಯಲ್ಲಿದ್ದಾಗ ಚಕಾರ ಶಬ್ಧವೆತ್ತದ ಅವರು ನಿವೃತ್ತಿಯಾದ ಕೂಡಲೇ ಅವರ ವೃತ್ತಿಯನ್ನೇ ನಿಂದಿಸುತ್ತಾ, ಇತರ ವೈದ್ಯರನ್ನೆಲ್ಲಾ ಹಣ ಪಿಪಾಸುಗಳು, ರಕ್ತದಾಹಿಗಳು, ಬ್ರಹ್ಮರಾಕ್ಷಸರು, ಕರುಣೆಯಿಲ್ಲದವರು ಎಂದೆಲ್ಲಾ ಬಿಂಬಿಸುತ್ತಾ ಮದುಮೇಹ, ಕೊಲೆಸ್ಟೆರಾಲ್ ಇತ್ಯಾದಿಗಳಿಗೆ ಇರುವ ಔಷಧಗಳೆಲ್ಲಾ ಔಷಧ ಕಂಪನಿಗಳ ಲಾಬಿ ಎಂದೆಲ್ಲಾ ಆಧಾರವಿಲ್ಲದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಒಂದಿಷ್ಟು ಸೋಜಿಗವೇ ಸರಿ. ಹಾಗೆಂದ ಮಾತ್ರಕ್ಕೆ ಅವರು ಹೇಳುವುದೆಲ್ಲಾ ಸತ್ಯಕ್ಕೆ ದೂರ ಎಂದಲ್ಲ. ಹಾಗೆಯೇ ಗಿಡಮೂಲಿಕೆ ಔಷಧಿಗಳಲ್ಲಿನ ಲಾಭಕೋರತನ, ಗುಣ ಮಟ್ಟ ಪರೀಕ್ಷೆಯ ಕೊರತೆ ಅಜ್ಞಾನ ಇವೆಲ್ಲವೂ ಇವರ ಕಣ್ಣಿಗೆ ಕಾಣುವುದೇ ಇಲ್ಲ..!!. ಎಲ್ಲವೂ ಸತ್ಯವೂ ಅಲ್ಲ. ಕೊಬ್ಬರಿ ಎಣ್ಣೆ ಹಾಕಿದರೆ ಅತ್ಯಂತ ಲಾಭಕರ, ಅಲೋವಿರಾ ದಿವ್ಯೌಷ್ಯದಿ ಎಂದೆಲ್ಲಾ ಹೇಳುವುದು ಒಂದಿಷ್ಟು ಸತ್ಯಕ್ಕೆ ದೂರ ಎಂದು ಸಂಶೋಧನೆಯ ಅನುಭವವಿರುವವರಿಗೆ ಗೊತ್ತಿರುವ, ಸಾಮಾನ್ಯ ಜನರಿಗೆ ಗೊತ್ತಿರದ ವಿಷಯ.
ಕಂಡದ್ದೆನ್ನಾ ಕುರುಡಾಗಿ ನಂಬುವವರಿಗೆ ಅವರ ನಂಬಿಕೆಯನ್ನು ಅತ್ಯಂತ ದೊಡ್ಡ ಹಿನ್ನೆಲೆಯ ವ್ಯಕ್ತಿ ಹೇಳಿದಾಗ ಅಪ್ಯಾಯಮಾನವಾಗಿ ತೋರುವುದರಲ್ಲಿ ಸಂಶಯವಿಲ್ಲ. ಜೀವನ ಶೈಲಿಯ ಬದಲಾವಣೆ, ಉತ್ತಮ ಆಹಾರ ಪದ್ಧತಿ, ಯೋಗದ ಸಾಧನೆ ಎಂಬುದನ್ನೆಲ್ಲಾ ಸಮರ್ಥಿಸುವ ಅವರು ಆಧುನಿಕ ವೈದ್ಯಕೀಯ ವಿಜ್ಞಾನಿಕ ವಿಧಾನವನ್ನು ಟೀಕಿಸುವ ಭರದಲ್ಲಿ ಮೂಢನಂಬಿಕೆಯತ್ತ ಜಾರಿ ಬಿಡುತ್ತಾರೆ. ಭಾಷಣ ಮಾಡುವಾಗ ಬರುವ ಚಪ್ಪಾಳೆಗಳು ಅವರಿಗೆ ಬಹುಶ: ಅತ್ಯಂತ ಖುಶಿ ತಂದಿರಬೇಕು. ಹಾಗೆಂದ ಮಾತ್ರಕ್ಕೆ ಅವರು ಹೇಳಿದ್ದೆಲ್ಲಾ ನಿಜವಲ್ಲ. ಬಹುಷ: ಅವರಿಗೆ ವಯಸ್ಸಾಗಿರುವುದರಿಂದ ವಯೋಸಹಜ ಅರು ಮರು ಬಂದಿರಬಹುದು.
ಇವರು ಹೇಳುವಂತೆ ಕಾಯಿಲೆಗಳು ಬರಲು ದ್ವೇಷ ಕಾರಣವಂತೆ! ಹಾಗೆಂದರೆ ಯಾರನ್ನೂ ಜೀವನದಲ್ಲೇ ದ್ವೇಷಿಸದ ಗಿಡ, ಮರ, ಪ್ರಾಣಿ, ಪಕ್ಷಿ ಮತ್ತು ಹಸುಗೂಸು, ಬುದ್ಧಿ ಮಾಂಧ್ಯರಿಗೆಲ್ಲಾ ಕಾಯಿಲೆಯೇ ಬರಬಾರದಿತ್ತು. ಅಷ್ಟೇ ಯಾಕೆ ? ನಮಗೆ ಕಾಯಿಲೆ ತರುವ ಬ್ಯಾಕ್ಟೇರಿಯಾ ಮತ್ತು ವೈರಾಣುಗಳಿಗೂ ಸಹ ಕಾಯಿಲೆ ಬರುತ್ತವೆ. ಇವುಗಳಿಗೇ ಕಾಯಿಲೆ ತರುವ ಬೇರೆ ಬ್ಯಾಕ್ಟೇರಿಯಾ ಮತ್ತು ವೈರಸ್ ಗಳಿವೆ. ಇವು ಯಾರನ್ನು ದ್ವೇಷಿಸಿವೆ?
ಇವರ ಅಭಿಪ್ರಾಯದಂತೆ ಕೆನಡಾ, ಬ್ರಿಟನ್, ಇಸ್ರೇಲ್ ಮುಂತಾದ ಜಗತ್ತಿನ ಐದು ದೇಶಗಳಲ್ಲಿ ವೈದ್ಯರು ಮುಷ್ಕರ ಹೂಡಿದಾಗ ಮರಣದ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆಯಾಯ್ತಂತೆ. ಇದನ್ನು ಸಮರ್ಥಿಸುವ ಯಾವುದೇ ಅಂಕಿ ಅಂಶಗಳ ಬಗ್ಗೆ ಅವರ ಉಲ್ಲೇಖಗಳಿಲ್ಲ. ಇವರು ಮೇಲಿಂದ ಮೇಲೆ ಹೇಳುವ ಸಂಸ್ಕೃತದ "ವೈದ್ಯರಾಜೋ ನಮಸ್ತುಭ್ಯಂ ಯಮರಾಜ ಸಹೋದರ" ಎಂಬುದು ಅನೇಕರಿಗೆ ಅಪ್ಯಾಯಮಾನ !!. ಇದರಲ್ಲಿ ಎಲ್ಲ ಪದ್ಧತಿಯ ವೈದ್ಯರನ್ನೂ ಅವರು ಜಾಣತನದಿಂದ ಅವರು ಸೇರಿಸುವುದೇ ಇಲ್ಲ.
ಥೈಲ್ಯಾಂಡ್ ನಲ್ಲಿ ದೇಶದಲ್ಲಿ ಆಧುನಿಕ, ಚೈನೀಸ್, ಚೈನೀಸ್ ಮಿಶ್ರ ಥೈಲ್ಯಾಂಡ್, ನಮ್ಮಲ್ಲಿರುವ ಹಾಗೆ ವಂಶ ಪಾರಂಪರಿಕ ಔಷಧಿ ಮತ್ತು ನಕಲಿ ವೈದ್ಯಕೀಯ. ಇದರಲ್ಲಿ ಯಾವುದು ಉತ್ತಮ ಅಂತ ರೀಸರ್ಚ್ ಮಾಡಿದಾಗ ಎಲ್ಲವೂ ಒಂದೇ ಅಂತ ಸಾಬೀತಾಯ್ತಂತೆ. ನಕಲಿ ವೈದ್ಯಕೀಯ ಮತ್ತು ನೈಜ ವೈದ್ಯಕೀಯ ಎಲ್ಲವೂ ಒಂದೇ ಅಂತೆ. ನಮ್ಮ ದೇಹವೇ ಗುಣ ಮಾಡುವುದರಿಂದ ವಿದೇಶಿ ಹೋಮಿಯೋಪತಿಯೇ ಇರಲಿ, ನಕಲಿ ವೈದ್ಯಕೀಯ ಇರಲಿ ಏನೂ ತೊಂದರೆ ಇಲ್ಲವಂತೆ !!.
ಜಗತ್ತು ಈಗಾಗಲೇ ಅನೇಕ ರೋಗಗಳಾದ ಕಾಲರಾ, ಮೈಲಿ ಪ್ಲೇಗ್ ಇನಫ್ಲೂಯೆಂಝಾ ಸಿಡುಬು ಕುಷ್ಠ ರೋಗಗಳ ಮಹಾ ಮಾರಿಗಳು ಬಂದಿದ್ದು ಕೇವಲ ಕೆಲವೇ ಕೆಲವು ದಶಕಗಳ ಹಿಂದೆ. ಜಗತ್ತಿನ ಶೇಕಡಾ 60 ಜನ ಸತ್ತರು. ಪ್ರತೀ ಮನೆಯಲ್ಲಿ ಕನೀಷ್ಟ ಒಂದು ಸಾವಾಗಿತ್ತು. ಪುರಾತನ ಪರಂಪರೆಯ ವೈದ್ಯ ಪದ್ಧತಿ, ನಾಟಿ ವೈದ್ಯ, ಹೋಮಿಯೋಪತಿ, ಆಗ ಕೆಲಸ ಮಾದಲೇ ಇಲ್ಲ. ಕೊನೆಗೂ ರೋಗ ನಿಯಂತ್ರಣವಾಗಿದ್ದು ಕಡ್ಡಾಯ ಲಸಿಕಾ ವಿಧಾನದಿಂದ !. ಡಾ:ಬಿ ಎಂ.ಹೆಗಡೆಯವರ ಪ್ರಕಾರ, ಸಿಡುಬಿನ ಔಷಧಿ ಭಾರತದಲ್ಲಿ ಮೊದಲೇ ಇತ್ತು, ಆದರೆ ಉಪಯೋಗಿಸಲಿಲ್ಲ ಎನ್ನುತ್ತಾರೆ. ಒಂದು ವಿದ್ಯೆಯಿಂದ ಮಾನವನ ಜೀವ ರಕ್ಷಣೆ ಸಾಧ್ಯವಾಗದೇ ಹೋದರೆ ಅದು ಇದ್ದರೇನು? ಬಿಟ್ಟರೇನು? ಎಂಬ ಬಗ್ಗೆ ಅವರು ತುಟಿ ಪಿಟಕ್ ಎನ್ನಲ್ಲ.
ದಾನ ಧರ್ಮ ಯಜ್ಞ ಸೇವೆ ಮಾಡುವುದರಿಂದ ಕಾಯಿಲೆ ಗುಣವಾಗುತ್ತದೆ, ಶಿವನ ಪೂಜೆಯಿಂದ ಅನೇಕಾನೇಕ ಮಾರಕ ರೋಗಗಳು ಗುಣವಾಗುತ್ತವೆ ಎಂದೆಲ್ಲಾ ಹೆಗಡೆಯವರೇ ಹೇಳುತ್ತಾರೆ. ಇದು ಮೂಢನಂಬಿಕೆಯ ಪ್ರಚೋದನೆಯಲ್ಲವೇ?
'ಕ್ಯಾನ್ಸರ್ ಆದವರು "ಕ್ಯಾನ್ಸರೇ ಗುಣವಾಗು" ಅಂತ ಹೇಳಿ, ಜನರನ್ನು ಪ್ರೀತಿಸಿ , ಒಳ್ಳೆಯ ಕಾರ್ಯ ಮಾಡಿದರೆ ಮಾತ್ರ ಬೇಗ ಕಾಯಿಲೆ ಗುಣವಾಗುತ್ತದೆಯಂತೆ !. ಕೀಮೋ ಥೆರಪಿ ತೆಗೆದುಕೊಳ್ಳಲೇ ಬಾರದಂತೆ!. ನಿಜ. ಕ್ಯಾನ್ಸರ್ ಪೀಡಿತರಿಗೆ ಮನಸ್ಥೈರ್ಯ ಜಾಸ್ತಿ ಇದ್ದರೆ ಅವರು ಬೇಗ ಗುಣವಾಗುತ್ತಾರೆ. ಆದರೆ ಕೀಮೋ ತೆಗೆದುಕೊಳ್ಳಬೇಡಿ, ಅದರ ಅಡ್ಡ ಪರಿಣಾಮ ಜಾಸ್ತಿ ಅಂತ ಅವರ ವಾದ. ಪರಿಣಾಮವಿರುವ ಎಲ್ಲಾ ಔಷಧಿಗಳಿಗೆ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಅಡ್ಡ ಪರಿಣಾಮ ಇಲ್ಲದಿದ್ದರೆ ಅದು ಔಷಧಿಯೂ ಅಲ್ಲ ಎನ್ನುವುದು " ಪ್ಲಾಸೆಬೋ"(ಸುಳ್ಳೌಷಧಿ) ಹೋಮಿಯೋಪತಿಗೆ ನಿಖರವಾಗಿ ಅನ್ವಯವಾಗುತ್ತದೆ !. ಕೀಮೋ ಒಂದು ಅತ್ಯಂತ ಅಡ್ಡ ಪರಿಣಾಮವುಳ್ಳ ಪದ್ಧತಿ ನಿಜ. ಆದರೆ ಶರೀರದಲ್ಲಿ ಅನಿಯಂತ್ರಿತವಾಗಿ ಬೆಳೆಯುವ ಅರ್ಬುಧ ಕೋಶಗಳ ಬೆಳವಣಿಗೆ ನಿಲ್ಲಿಸ ಹೊರಟರೆ ಶರೀರದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ತಲೆ ಕೂದಲು, ಕೆಂಪು ಬಿಳಿ ರಕ್ತಕಣಗಳು ಇದರ ಪರಿಣಾಮಕ್ಕೆ ತುತ್ತಾಗಿ ತುತ್ತಾಗಿ ಅಡ್ಡ ಪರಿಣಾಮ ಸಹಜ. ಈ ಅಡ್ಡ ಪರಿಣಾಮದ ಬಗ್ಗೆ ಎಲ್ಲರಿಗೂ ತಿಳಿದಿದೆಯಲ್ಲವೇ? ಅಡ್ಡ ಪರಿಣಾಮವನ್ನೇ ಏಕೆ ವೈಭವೀಕರಿಸುತ್ತೀರಿ? ಗುಣವಾದ ಸಹಸ್ರಾರು ಜನ ಇಲ್ಲವೇ? ಇದು ಹೆಗಡೆಯವರ ಬುದ್ಧಿವಂತ ಮೆದುಳಿಗೆ ಅರ್ಥವಾಗುವುದೇ ಇಲ್ಲವೇ?
ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಅನೇಕ ಲೋಪದೋಷಗಳಿವೆ ನಿಜ. ಆದರೆ ಇದು ಚಲನಶೀಲ ವಿಷಯ. ನಿರಂತರ ಸಂಶೋಧನೆಗಳ ಒರೆಗೆ ಒಡ್ಡಿಕೊಂಡು, ಹಲವರ ಟೀಕೆಗೂ ಗುರಿಯಾಗಿ ವಿಜ್ಞಾನದ ಕತ್ತಿಯಗುಲಿಗೆ ತಗುಲಿ ಪರಿಪೂರ್ಣತ್ವದತ್ತ ಸಾಗುವ ಪರಿ ಗಮನಿಸಿದರೆ ಎರಡು ನೂರು ವರ್ಷಗಳ ಹಿಂದೆ ಜರ್ಮನಿಯಲ್ಲಿ ಹುಟ್ಟಿ ಅಲ್ಲೇ ಸಮಾಧಿಯಾದ ವಿಜ್ಞಾನದ ಗಂಧ ಗಾಲಿಯಿಲ್ಲದ ಹೋಮಿಯೋಪತಿಯೆಂಬ ವಿದೇಶಿ ಪದ್ಧತಿಯನ್ನು ಅನುಸರಿಸುವವರ ಬಗ್ಗೆ ಕನಿಕರವಾಗುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಒಂದಿಷ್ಟು ಮೇಲ್ದರ್ಜೆಗೇರಿಸಿಕೊಂಡು, ಬದಲಾವಣೆ ಮತ್ತು ಸಂಶೋಧನೆಯ ಗಾಳಿಕೊಡ್ಡಿಕೊಂಡರೆ ವಿಶ್ವಗುರುವಿನ ಸ್ಥಾನ ತುಂಬಬಲ್ಲ ನಮ್ಮ ದೇಶದ ಆಯುರ್ವೇದ ಅನೇಕರಿಗೆ ನೆನಪೇ ಆಗುವುದಿಲ್ಲ !. ?
ಆಸ್ಪತ್ರೆಗೆ ಹೋದಾಗ ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯುವುದು, ನಂತರ ಅವರು ರೋಗ ಪತ್ತೆಗಾಗಿ ಬರೆದು ಕೊಟ್ಟ ಅನೇಕ ರೀತಿಯ ಪರೀಕ್ಷೆಗಳನ್ನು ಹಣ ನೀಡಿ ಮಾಡಿಸುವುದು, ತದ ನಂತರ ಬರೆದುಕೊಟ್ಟ ಔಷಧಿಯನ್ನು ಪಡೆಯುವಾಗ ಪುನ: ನೀಡಬೇಕಾದ ಹಣ, ಶಸ್ತ್ರಚಿಕಿತ್ಸೆಯಂತಹದ್ದಕ್ಕೆ ಹಣ, ಅದರಲ್ಲಿಯೇ ಇರುವ ಒಂದಷ್ಟು ಹಣದಾಹಿಗಳ ಮೋಸ ಇವೆಲ್ಲಾ ಸಾಮಾನ್ಯ ಜನರನ್ನು ಆಧುನಿಕ ವೈದ್ಯಕೀಯ ಪದ್ಧತಿಯನ್ನು ರೇಜಿಗೆಯಿಂದ, ದ್ವೇಷದಿಂದ ನೋಡುವಂತೆ ಮಾಡಿವೆ. ಹಾಗೆಂದು ವಿವಿಧ ರೋಗ ಪತ್ತೆ ಪರೀಕ್ಷೆಗಳು, ಶಸ್ತ್ರಚಿಕಿತ್ಸೆ ಇದನ್ನು ಸರಿಯಾಗಿ ಮಾಡದೇ ಇದ್ದರೂ " ಟೆಸ್ಟು ಮಾಡಿಸಬೇಕಿತ್ತು, ಸುಮ್ಮನೇ ಔಷಧ ಬರೆದು ಕೊಡುತ್ತಾರೆ ನೋಡಿ" ಎನ್ನುವವರ ಸಂಖ್ಯೆಯೂ ಕಡಿಮೆಯಿಲ್ಲ. ಇದನ್ನು ಸುಧಾರಿಸುವ ಕುರಿತು ಒಂದು ಕಾಲದಲ್ಲಿ ಇದೇ ವ್ಯವಸ್ಥೆಯ ಭಾಗವಾಗಿದ್ದವರು ಸತತ ಪ್ರಯತ್ನ ಮಾಡುವದನ್ನು ಬಿಟ್ಟು ಇಡೀ ವ್ಯವಸ್ಥೆಯನ್ನೇ ಮನಸಾರೆ ಟೀಕಿಸುವ ನೈತಿಕ ಮೌಲ್ಯವನ್ನು ಹೆಗಡೆಯವರು ಕಳೆದುಕೊಂಡು ಬಹಳ ಕಾಲವಾಯಿತೆನ್ನುತ್ತಾರೆ ಪ್ರಾಜ್ಞರು!.
ಅವರಿಗೂ ಸಹ ರಾಷ್ಟ್ರೀಯ ವೈದ್ಯಕೀಯ ದಿನದ ಶುಭಾಶಯಗಳು.
ಡಾ: ಎನ್.ಬಿ.ಶ್ರೀಧರ
ಪಶುವೈದ್ಯಕೀಯದಲ್ಲಿ ಹೋಮಿಯೋಪತಿ !! ಏನು? ಎತ್ತ?
ಭಾಗ 3
-----
ಭಾಗ -1: 6-6-2021 ರ ಸಂಚಿಕೆಯಿಂದ ಮುಂದುವರೆದಿದೆ. ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ಕಿಸಿ https://www.facebook.com/shridharvet/posts/10219826106588130)
ಭಾಗ -2 : ದಿನಾಂಕ ೨೦-೬-೨೦೨೧ ರ ಸಂಚಿಕೆಯಿಂದ ಮುಂದುವರೆದಿದೆ.. ಈ ಸಂಚಿಕೆ ಓದಲು ಇಲ್ಲಿ ಕ್ಲಿಕ್ಕಿಸಿ
https://www.facebook.com/shridharvet/posts/10219907078292372
ಹಾಗಿದ್ದರೆ ಏನು ವಾಸ್ತವ?
ಹಾನಿಮನ್ ೨೦೦ ವರ್ಷಗಳ ಹಿಂದೆ ಹೋಮಿಯೋಪತಿಯನ್ನು ಮನುಷ್ಯರ ಚಿಕಿತ್ಸೆಗೆಂದು ಕಂಡು ಹಿಡಿದ. ಆಗ ಮಾನವ ಶರೀರ ಹೇಗೆ ಕೆಲಸ ನಿರ್ವಹಿಸುತ್ತದೆಯೆಂದು ಒಂದಿಷ್ಟೂ ಆತನಿಗೆ ಗೊತ್ತಿಲ್ಲವಾಗಿತ್ತು. ಆ ಕಾಲದಲ್ಲಿ ರಸಾಯನಶಾಸ್ತ್ರದ ಭ್ರೂಣವೇ ಉತ್ಪತ್ತಿಯಾಗಿಲ್ಲವಾಗಿತ್ತು. ಆತನಿಗೆ ಒಂದು ಹಂತದ ವರೆಗೆ ವಸ್ತುವನ್ನು ತಿಳಿಗೊಳಿಸುತ್ತಾ ಹೋದ ಹಾಗೇ ಅದರಲ್ಲಿನ ಮೂಲ ಕಣಗಳು ನಿಶ್ಯೇಷವಾಗುತ್ತದೆಯೆಂದು ತಿಳಿದಿಲ್ಲವಾಗಿತ್ತು. ಔಷಧಿಯೆಂದರೇನು? ಅದನ್ನು ಕಂಡು ಹಿಡಿಯುವ ಪದ್ಧತಿ ಹೇಗೆ ಎಂಬ ಬಗ್ಗೆ ಅರಿವಿಲ್ಲದ ಕಾಲ ಅದು. ನಿಯಂತ್ರಿಸಿದ ದ್ವಿಮುಖ ಪ್ರಯೋಗ, ಸುಳ್ಳೌಷಧ ಪರಿಣಾಮ, ಆದರೆ ಈವತ್ತು ಇದೆಲ್ಲಾ ನಮ್ಮ ಜನಕ್ಕೆ ತಿಳಿದಿದೆ. ಆದರೆ ಈವತ್ತಿನ ಮಟ್ಟಿಗೆ ಆಧುನಿಕವಾಗಿರುವ ಕಾಲದಲ್ಲಿ ೨೦೦ ವರ್ಷದಷ್ಟು ಹಿಂದಿನ ಕಾಲದ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳುವುದು ಉತ್ತಮ. ಈ ಕಲ್ಪನೆಯನ್ನು ಸರಿಪಡಿಸಿಕೊಳ್ಳುವ ಬದಲು ಹಳೆಯ ನಂಬಿಕೆಗೇ ಜೋತು ಬೀಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ. ಇದೊಂದು ಕಂದಾಚಾರದಂತ ಅವೈಜ್ಞಾನಿಕ ಪದ್ಧತಿಯಲ್ಲವೇ? ನಿರಕ್ಷರ ಕುಕ್ಷಿಗಳಿಗೂ ಅರ್ಥವಾಗುವ ಸರಳ ಸತ್ಯ ನಿಮಗ್ಯಾಕೆ ಅರ್ಥವಾಗಲ್ಲ? ಕಾರಣ ಇದರ ಬಗ್ಗೆ ಇರುವ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಈ ಕೆಳಗಿನ ಪ್ರಶ್ನಾವಳಿಗಳನ್ನು ಬಳಸಿಕೊಳ್ಳೋಣ.
೧. ಹೋಮೊಯೋಪತಿ ವಸ್ತುಗಳು ಪಶುವಿನಲ್ಲಿ ಹೇಗೆ ಕೆಲಸ ನಿರ್ವಹಿಸುತ್ತವೆ?
ಈವರೆಗೂ ಯಾರಿಂದಲೂ ಉತ್ತರಿಸಲು ಸಾಧ್ಯವಾಗದ ವಿಷಯವೆಂದರೆ ಹೇಗೆ ಈ ಔಷಧಿಗಳು ಮನುಷ್ಯನ ಅಥವಾ ಪ್ರಾಣಿಯ ಶರೀರದ ಮೇಲೆ ಕಾರ್ಯ ನಿರ್ವಹಿಸುತ್ತವೆ ? ಎಂಬುದು. ಮೊದಲನೆಯದು ಇದು ನ್ಯಾನೋ ಅಣುಗಳಂತೆ ಕೆಲಸ ಮಾಡುತ್ತದೆಯೆಂಬುದು ಹಾಗೂ ಪರಮಾಣುವಿನಂತೆ ಅತಿ ಕಡಿಮೆ ಪ್ರಮಾಣದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯನ್ನು ಹೊಂದಿ ಕಾರ್ಯನಿರ್ವಹಿಸುತ್ತದೆಯೆಂಬುದು ಅವರ ವಾದ. ಆದರೆ ಯುರೇನಿಯಂ, ಥೋರಿಯಂ ಇತ್ಯಾದಿಗಳು ಮಾತ್ರ ಪರಮಾಣು ಶಕ್ತಿಯನ್ನು ಉತ್ಪಾದಿಸುತ್ತವೆಯೆಂಬ ಮತ್ತು ಎಲ್ಲಾ ವಸ್ತುಗಳು ಪರಮಾಣುಗಳನ್ನು ಉತ್ಪಾದಿಸುವುದಿಲ್ಲವೆಂಬ ಸುಲಭ ಭೌತಶಾಸ್ತ್ರ ಅರ್ಥವಾಗಲಿಲ್ಲ. ಎರಡನೆಯದು ನೀರಿಗೆ “ನೆನಪಿನ”ಶಕ್ತಿ ಇದೆ ಎನ್ನುವುದು!! ಅಲ್ಲದೇ “ದೈವಿ ಶಕ್ತಿ” ಕೇಂದ್ರೀಕೃತವಾಗಿ ಪ್ರಭಲವಾಗಿ ಕಾರ್ಯ ನಿರ್ವಹಿಸುತ್ತದೆಯೆಂಬ ವಾದ. ಆದರೆ ಇದನ್ನು ಪುಷ್ಟಿಗೊಳಿಸುವ ಯಾವ ಸಂಶೋಧನಾ ಕಾರ್ಯವೂ ನಡೆಯಲೇ ಇಲ್ಲ!. ಅಸಲಿಗೆ ಪಶುವೈದ್ಯಕೀಯ ಹೋಮಿಯೋಪತಿ ಪ್ರತಿಪಾದಕರಿಗೆ ಆಧುನಿಕ ರೀತಿಯಲ್ಲಿ ಸಂಶೋಧನೆ ಮಾಡಬೇಕೆಂಬ ತತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಆಧುನಿಕ ಜಗತ್ತಿನ ಎಲ್ಲಾ ಸೌಲಭ್ಯವನ್ನೂ ಸ್ವಲ್ಪವೂ ಬಿಡದೇ ಅನುಭವಿಸುವವರಿಗೆ ಹೋಮಿಯೋಪತಿಯನ್ನೂ ಸಹ ಆಧುನಿಕ ಪದ್ಧತಿಯಲ್ಲೇ ಪರೀಕ್ಷೆಗೊಳಪಡಿಸಬೇಕೆಂಬ ಬದ್ಧತೆ ಬರಲಿಲ್ಲ. ಹೋಮಿಯೋಪತಿಯ ವಸ್ತುಗಳನ್ನು ತಯಾರು ಮಾಡುವಾಗ ಜಾಸ್ತಿ ಶಕ್ತಿಶಾಲಿ ವಸ್ತುವು ಪದ್ಧತಿಯು ಓಲಿಂಪಿಕ್ ಗಾತ್ರದ ಈಜುಗೊಳದಲ್ಲಿ ಚಿಕ್ಕ ಹನಿಯನ್ನು ಹಾಕಿ ಇದು ಭಾರಿ ಶಕ್ತಿಶಾಲಿ ಎಂದು ಬಿಂಬಿಸಿದಂತೆ !
ಹಾನಿಮನ್ನನಿಗೆ ಅವನ ಜೀವಿತ ಕಾಲದಲ್ಲೇ “ದೈವಿಕ ಶಕ್ತಿ” ನೀರಿನಲ್ಲಿ ಹುದುಗುವುದು ಈ ರೀತಿಯ ವಾದಗಳನ್ನು ಎದುರಿಸಲು ಸಾಧ್ಯವಿಲ್ಲದೇ ಇನ್ನೊಂದು “ಮಿಯಾಸಮ್” ಎಂಬ ವಿಚಿತ್ರ ವಾದ ಮಂಡಿಸಿದ. ಹತಾಶೆಯ ಪರಾಕಾಷ್ಟೆಗೆ ತಲುಪಿದ ಆತ ಕಾಯಿಲೆಯೆಂಬುದೊಂದು ದುಷ್ಟಶಕ್ತಿಯ ಪ್ರತಿರೂಪ. ಇದಕ್ಕೆ ಒಡ್ಡಿಕೊಂಡ ಮನುಜನ ಮುಂದಿನ ಜನಾಂಗಕ್ಕೂ ಸಹ ಶಾಪದಂತೆ ಇದು ಹಬ್ಬುತ್ತದೆ ಎಂದ. ಹಾನಿಮನ್ ಬರೆದ “ಆರ್ಗನಾನ್ ಆಫ್ ಮೆಡಿಸಿನ್” ಎಂಬ ಪುಸ್ತಕವು ಹೋಮಿಯೋಪತಿಯವರಿಗೆ “ಭಗವದ್ಗೀತೆ,ಬೈಬಲ್, ಕುರಾನ್” ನಷ್ಟು ಪವಿತ್ರವಾಗಿದ್ದು, ಇರುತ್ತಿದ್ದು ಇದರಲ್ಲಿ ಆತ “ದೈವಿಕ ಶಕ್ತಿಯು ದುಷ್ಟಶಕ್ತಿಯ ತುಳಿತಕ್ಕೆ ಒಳಗಾಗುವುದೇ ಕಾಯಿಲೆ” ಎಂದ. ಈವತ್ತಿನ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಕೋರೋನಾ ಸೂಕ್ಷ್ಮಾಣುವನ್ನೂ ಪ್ರತ್ಯಕ್ಷವಾಗಿ ನೋಡಬಹುದಾದಂತ ಸೌಲಭ್ಯಗಳಿದ್ದು, ಔಷಧಗಳೂ ಸಹ ಎಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬ ನಿಖರ ಪತ್ತೆ ಸಾಧ್ಯವಿದೆ. ಹೇಗೆ ಕೆಲಸ ನಿರ್ವಹಿಸುತ್ತದೆಯೆಂದೇ ಗೊತ್ತಿರದ, ಔಷಧಿ(?) ಗಳ ತಯಾರಿಕಾ ಪದ್ಧತಿಯೇ ಪ್ರಶ್ನಿಗೊಳಗಾದಾಗ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಿದ್ದರೂ ಇದರ ಬೆಂಬಲ ಹೇಗೋ ಅರ್ಥವಾಗುತ್ತಿಲ್ಲ..!!.
ವೈರಾಣುವಿನಂತ ಕೋಟ್ಯಾನು ಕೋಟಿ ಚಿಕ್ಕ ಗಾತ್ರದ ಜೀವಿಯಿಂದ ಕಾಯಿಲೆ ಬರುವುದೆಂದು ಕಂಡು ಹಿಡಿದಿದ್ದರೂ ಸಹ ಓಬಿರಾಯನ ಕಾಲದ ೨೦೦ ವರ್ಷಗಳಿಂತಲೂ ಹಳೆಯದಾದ ಆವತ್ತು ಮತ್ತು ಈವತ್ತಿಗೂ ಅವಾಸ್ತವಿಕವಾದ ಹಾನಿಮನ್ನಿನ ವಾದವನ್ನು ಒಪ್ಪಿ ಹೋಮಿಯೋಪತಿ ಚಿಕಿತ್ಸೆ ಎಷ್ಟು ಸಮಂಜಸವೆಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಇಷ್ಟಕ್ಕೂ ಹಾನಿಮನ್ನಿಗೆ ರೋಗವೊಂದು ಸೂಕ್ಷ್ಮಾಣುಗಳಿಂದ ಬರುವುದೆಂಬ ಕಲ್ಪನೆಯೇ ಇಲ್ಲವಾಗಿತ್ತು !. ವೈರಾಣುಗಳ ಕಾಯಿಲೆ ಹಾಗಿರಲಿ,..ಬ್ಯಾಕ್ಟಿರಿಯಾದಿಂದ ಕಾಯಿಲೆ ಬರುತ್ತದೆಯೆಂಬ ಕಿಂಚಿತ್ ಕಲ್ಪನೆಯೂ ಸಹ ಅವನಿಗಿಲ್ಲವಾಗಿತ್ತು.ಈ ಕಾಲದಲ್ಲೂ ಸಹ ಹೋಮಿಯೋಪತಿಯಲ್ಲಿ ಕೋವಿಡ್-೧೯ ಕ್ಕೆ ನಮ್ಮ ಹತ್ತಿರ ಔಷಧಿಯಿದೆಯೆಂಬ ಒಣ ಜಂಬದ ಮಾತಿಗೆ ಜೈ ಎನ್ನಲೇ ಬೇಕಾಗಿದೆ. ಇದು ಸೈಕಲ್ ರಿಪೇರಿ ಮಾಡುವ ಹುಡುಗ, ವಿಮಾನವನ್ನೂ ತಾನೇ ರಿಪೇರಿ ಮಾಡುತ್ತೇನೆ ಎಂದ ಹಾಗಾಯ್ತು !!. ಇದಕ್ಕೆಲ್ಲಾ ನಮ್ಮ ದೇಶದಲ್ಲಿ ಜಾಗವಿದೆ..
೨. ಹೋಮಿಯೋಪತಿಗೆ ಅಡ್ಡ ಪರಿಣಾಮಗಳಿಲ್ಲ !
ಆಧುನಿಕ ಪಶುವೈದ್ಯಕೀಯ ಪದ್ಧತಿಯ ಔಷಧಗಳಿಗೆ ಅನೇಕಾನೇಕ ಅಡ್ಡ ಪರಿಣಾಮಗಳಿದ್ದು, ಹೋಮಿಯೋಪತಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದು ಒಂದು ನಂಬಿಕೆ. “ಯಾವುದೇ ಔಷಧಿಗೆ ಪರಿಣಾಮವಿದೆಯಂದರೆ ಅದಕ್ಕೊಂದು ಅಡ್ಡ ಪರಿಣಾಮವಿದ್ದೇ ಇರುತ್ತದೆ.ಅಡ್ಡ ಪರಿಣಾಮವಿಲ್ಲದಿದ್ದರೆ ಅದಕ್ಕೆ ಪರಿಣಾಮವೂ ಇಲ್ಲ” ಎಂಬುದು ಔಷಧಗಳ ಬಗ್ಗೆ ಪ್ರಸಿದ್ಧ ವಿಜ್ಞಾನಿಗಳೊಬ್ಬರ ಹೇಳಿಕೆ. ಅಡ್ಡ ಪರಿಣಾಮ ಇಲ್ಲ ಎಂದರೆ ಅದು ಔಷಧಿಯೇ ಅಲ್ಲ. ಸುಳ್ಳೌಷಧಿ. ಅಥವಾ ಅದರ ಅಡ್ಡ ಪರಿಣಾಮಗಳ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ ಎಂದರ್ಥ !!. ಯಾವುದೇ ಔಷಧಿ ಪದ್ಧತಿಯಾಗಲಿ ಅದರ ಔಷಧಿಗಳಿಗೆ ಅಡ್ಡ ಪರಿಣಾಮಗಳಿಲ್ಲವೆಂದರೆ ತತ್ಕ್ಷಣ ಅದಕ್ಕೆ ಪರಿಣಾಮವೂ ಇಲ್ಲವೆಂದು ಭಾವಿಸಲೇಬೇಕು. ಉದಾಹರಣೆಗೆ ಕೊರೋನಾ ವೈರಾಣುವನ್ನೇ ತೆಗೆದುಕೊಳ್ಳೋಣ. ಇದು ಶ್ವಾಸಕೋಶದ ಜೀವಕೋಶಗಳೊಳಗೆ ನುಗ್ಗಿ ಅಲ್ಲಿನ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಂಡು ತನಗೆ ಬೇಕಾದ ವಸ್ತುಗಳನ್ನು ಉತ್ಪಾದಿಸುವಂತೆ ಜೀವಕೋಶಕ್ಕೆ ಆಜ್ಞಾಪಿಸುತ್ತದೆ. ನಮ್ಮ ಶರೀರದ ರೋಗನಿರೋಧಕ ಕಣಗಳು ನಮ್ಮ ದೇಹದ ಜೀವಕೋಶಗಳನ್ನು ಪರಕೀಯ ಶಸ್ತ್ರುಗಳೆಂದು ಭಾವಿಸಿ ಹೊಡೆದು ಹಾಳುಗೆಡವುತ್ತವೆ. ಔಷಧಿಯು ಭಾಧಿತ ಜೀವಕೋಶಗಳನ್ನು ಪ್ರವೇಶಿಸಿ ವೈರಾಣುವಿನ ಮೇಲೆಯೇ ನಿಖರವಾಗಿ ಕಾರ್ಯನಿರ್ವಸುವುದು ಕಷ್ಟಕರ. ಜೀವಕೋಶದಲ್ಲಿನ ಅಕ್ಕ ಪಕ್ಕದ ಕಣಗಳನ್ನೂ ಸಹ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಾಧಿಸಿಯೇ ತೀರುತ್ತವೆ. ಇದಕ್ಕೇ ಅಡ್ಡ ಪರಿಣಾಮ ಕಾಣಿಸಿಕೊಳ್ಳುವುದು.
೩. ಇದು ಔಷಧ ತಯಾರಿಕಾ ಕಂಪನಿಗಳ ಲಾಬಿಯೇ?
ಹೋಮಿಯೋಪತಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಹಣ ಬರದೇ ಇರುವುದರಿಂದ ಆಧುನಿಕ ಕಾಲದ ಔಷಧ ತಯಾರಿಕಾ ಕಂಪನಿಗಳ ಲಾಬಿಗೆ ನಲುಗಿ ಕಮರಿ ಹೋಗಿದೆ ಎಂಬುದು ಒಂದು ವಾದ. ಹೋಮಿಯೋಪತಿ ಔಷಧಿಗಳ ಬೆಲೆಯೇನೂ ಈವತ್ತು ಕಡಿಮೆ ಇಲ್ಲ. ತಯಾರಿಕೆಗೆ ೧೦ ರೂಪಾಯಿ ಖರ್ಚಾದರೆ ಇದನ್ನು ಮಾರುವುದು ೧೦೦೦ ರೂಪಾಯಿಗೆ !. ಇದೊಂದು ಬಿಲಿಯನ್ ಡಾಲರ್ ಬಿಸಿನೆಸ್ !!. ಇದಕ್ಕೆ ಚಿಕ್ಕ ಉದಾಹರಣೆ ಡಾ:ಬಾತ್ರಾ ಹೋಮಿಯೋಪತಿಯೆಂಬ ಪ್ರಪಂಚದಾದ್ಯಂತ ಸುಮಾರು ೧೨೩ ದೇಶಗಳ ೨೦೦ ಕ್ಕೂ ಹೆಚ್ಚು ಶಹರಗಳಲ್ಲಿರುವ ಕೇಂದ್ರಗಳು. ಇವರು ಹೊಸ ಹೊಸ ಹೋಮಿಯೋಪತಿ ವಸ್ತುಗಳ ಸಂಶೋಧನೆಗೆಂದು ಬಿಡಿಗಾಸನ್ನು ಖರ್ಚು ಮಾಡುತ್ತಾರೆಯೇ? ಖಂಡಿತಾ ಇಲ್ಲ. ಇವರಿಗೆ ಏನಾದರೂ ರಿಸ್ಕ್ ಇದೆಯೇ? ಇಲ್ಲವೇ ಇಲ್ಲ. ಏಕೆಂದರೆ ಇವರು ಚಿಕಿತ್ಸೆ ನೀಡುವುದು ಮಾರಣಾಂತಿಕವಲ್ಲದ ಮಹಿಳೆಯರಲ್ಲಿ ಮಕ್ಕಳಾಗದ ತೊಂದರೆ, ಧೀರ್ಘಕಾಲಿಕ ಚರ್ಮದ ತೊಂದರೆ, ಅಲರ್ಜಿ ನರಮಾನಸ ಕಾಯಿಲೆಗಳಾದ ಅಸ್ಥಮಾ, ಐಬಿಎಸ್ ಇತ್ಯಾದಿ. ಔಷಧ ಕಂಪನಿಗಳು ಲಾಭ ಮಾಡಲೆಂದೇ ಔಷಧಗಳನ್ನು ಉತ್ಪಾದಿಸುವುದು. ಹೊಸ ಔಷಧ ಪತ್ತೆಗೆ ಹಾಕಿದ ಬಿಲಿಯನ್ ಗಟ್ಟಲೇ ವ್ಯಯವು ಪಾಪಸ್ಸು ಬರಬೇಕಲ್ಲವೇ? ಆದರೆ ೫ ವರ್ಷಗಳ ನಂತರ ಪೇಟೆಂಟ್ ಬಿಟ್ಟುಕೊಡಲೇ ಬೇಕು! ಲಾಬಿ ಎಂದರೆ ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳ ಮೇಲೆ ಒತ್ತಡ ಹಾಕುವುದು. ಇಲ್ಲಿ ಲಾಬಿ ಎಂದರೆ ಯಾವ ಕಂಪನಿ ಯಾರ ಮೇಲೆ ಒತ್ತಡ ಹಾಕಿತು? ಅವರ ನಿರ್ಧಾರ ಇಡೀ ಪ್ರಪಂಚ ವ್ಯಾಪ್ತಿಯೇ ಎಂಬುದನ್ನು ಪರಾಮರ್ಷಿಸಬೇಕಲ್ಲವೇ?
೪. ಹೋಮಿಯೋಪತಿ ವಿದೇಶಿಯಲ್ಲವೇ?
ನಿಜ. ಹೋಮಿಯೋಪತಿ ಶುದ್ಧ ವಿದೇಶಿ ಪದ್ಧತಿ. ಮಾತೆತ್ತಿದರೆ ಆಧುನಿಕ ಪಶುವೈದ್ಯಕೀಯನ್ನು ಪಾಶ್ಚಿಮಾತ್ಯ ದೇಶಗಳ ಪದ್ಧತಿ ಎನ್ನುವ ಜನಕ್ಕೆ ಹೋಮಿಯೋಪತಿಯ ಮೂಲವೆನ್ನುವ ಜನಕ್ಕೆ ಹೋಮಿಯೋಪತಿ ಜರ್ಮನಿ ದೇಶದ್ದೆಂಬ ಸರಳ ಸತ್ಯ ಮರೆತೇ ಹೋಗುತ್ತದೆ. ನಮ್ಮದೇ ದೇಶದ ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಆಯುರ್ವೇದವನ್ನು ಬದಿಗೊತ್ತಿ ಪರದೇಶದ ಹೋಮಿಯೋಪತಿಯನ್ನು ನೆಚ್ಚಿಕೊಳ್ಳುವುದು ಎಷ್ಟರ ಮಟ್ಟಿಗೆ ಯೋಗ್ಯ ಎಂಬುದನ್ನು ಪ್ರಶ್ನಿಸಿಕೊಳ್ಳುವುದು ಒಳ್ಳೆಯದು. ಇಂಗ್ಲೆಂಡ್, ಫ್ರಾನ್ಸ್. ಸ್ಪೇನ್, ಸ್ವಿಟ್ಜರ‍್ಲ್ಯಾಂಡ್, ಆಸ್ಟ್ರೇಲಿಯಾ ಇತ್ಯಾದಿ ಅನೇಕ ದೇಶಗಳಲ್ಲಿ ಹೋಮಿಯೋಪತಿ ಕೆಲಸಕ್ಕೆ ಬಾರದ್ದು, ಇದು ರೋಗ ಚಿಕಿತ್ಸೆಯಲ್ಲಿ ತಪ್ಪು ದಾರಿ ಹಿಡಿಸುತ್ತದೆಯೆಂದು ಹೋಮಿಯೋಪತಿಯ ಉಪಯೋಗಕ್ಕೆ ಕಡಿವಾಣ ಹಾಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೋಜಿಗವೆಂದರೆ ಹೋಮಿಯೋಪತಿ ಪಿತಾಮಹ ಹಾನಿಮನ್ನಿನ ಹುಟ್ಟೂರು ಜರ್ಮನಿಯಲ್ಲೇ ಅಲ್ಲಿಯ ಸರ್ಕಾರ ಇದರ ಉಪಯೋಗ “ಅವೈಜ್ಞಾನಿಕ” ಎಂದು ಆದೇಶ ಹೊರಡಿಸಿರುವುದು!! ನಮ್ಮದೇ ದೇಶದ ಪಾರಂಪರಿಕ ಔಷಧ ಪದ್ಧತಿಯನ್ನು ಆಧುನಿಕೀಕರಣಗೊಳಿಸಿ ಉಪಯೋಗಿಸಬೇಕೆಂದು ಫರ್ಮಾನು ಹೊರಡಿಸಬೇಕಾದವರು ವಿದೇಶಿಯಾದ ಈ ಪದ್ಧತಿಯನ್ನು ಹೇಗೆ ಒಪ್ಪುತ್ತಾರೆಯೋ ಗೊತ್ತಿಲ್ಲ!!.
೫. ಪಶುಗಳಲ್ಲಿ ಹೋಮಿಯೋಪತಿ ಉಪಯೋಗಿಸಿ ಗುಣಪಡಿಸಿದ್ದೇನಲ್ಲ? ಗುಣವಾಗಿದೆಯಲ್ಲ?
ಇದಕ್ಕೊಂದು ವಿಚಿತ್ರ ಉದಾಹರಣೆ ನೀಡಬಹುದು. ನೆಗಡಿ ನಿವಾರಣೆಗೆ ಔಷಧಿ ತೆಗೆದುಕೊಂಡರೆ ಕಡಿಮೆಯಾಗಲು ಒಂದು ವಾರ ಬೇಕು.. ಆದರೆ ಏನೂ ಇಲ್ಲದೇ ಕಡಿಮೆಯಾಗಲು ೭ ದಿನ ಸಾಕು. ಬಹಳಷ್ಟು ಜನಕ್ಕೆ ಕಾಯಿಲೆ ಬರುವುದು ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಎನ್ನುವುದು ಕೊರೋನಾ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೂ ಅರ್ಥವಾದ ಸಂಗತಿ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಇದರ ಅವಧಿಯನ್ನು, ತೀವ್ರತೆಯನ್ನು ಕಡಿಮೆ ಮಾಡಬಹುದು.
ಎರಡನೆಯದಾಗಿ ಗೋಪಾಲಕರು ಹೋಮಿಯೋಪತಿಯ ಮೊರೆಹೋಗುವುದು ಆಧುನಿಕ ಪಶುವೈದ್ಯಕೀಯ ವಿಜ್ಞಾನದ ಮೂಲಕ ಸಾಕಷ್ಟು ಪರೀಕ್ಷೆಗಳ ಮೂಲಕ, ವಿವಿಧ ಉಪಕರಣಗಳ ಸಹಾಯದಿಂದ ಇದರಲ್ಲೇ ತಜ್ಞರಾದ ವೈದ್ಯರು ರೋಗ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ಬರೆದು ಕೊಟ್ಟು ಅದು ಕಡಿಮೆಯಾಗದಾಗ. ಪಶುಚಿಕಿತ್ಸೆಗೆ ಹೋಮಿಯೋಪತಿ ಉಪಯೋಗಿಸುವವರು “ ಆಧುನಿಕ ಪಶುವೈದ್ಯಕೀಯ ಪದ್ಧತಿಯ ಔಷಧಿಗಳ ಜೊತೆಯೇ ಹೋಮಿಯೋಪತಿ ಉತ್ಪನ್ನಗಳನ್ನು ತೆಗೆದುಕೊಳ್ಳಿ” ಎನ್ನುತ್ತಾರೆ. ಅದರ ಪಾಡಿಗೆ ಅದು ಕಡಿಮೆಯಾದರೆ ಅದರ ಶ್ರೇಯವನ್ನೆಲ್ಲಾ ತಮಗೇ ತೆಗೆದುಕೊಳ್ಳುವುದು ಅವರ ಹವ್ಯಾಸ. ಹೋಮಿಯೋಪತಿಯನ್ನು ನೀಡಲು ಈ ಕುರಿತು ಪದವಿ ಪಡೆಯಬೇಕು ಮತ್ತು ಓದಲೇ ಬೇಕೆಂದೇನೂ ಇಲ್ಲ! ಹವ್ಯಾಸಿಗಳೆಲ್ಲಾ ಇದರ ಪ್ರಯೋಗ ನಡೆಸುವವರೇ..ಹಳ್ಳಿಯ ನಿರಕ್ಷರ ಕುಕ್ಷಿಗಳನ್ನು ಪಾಪ ಬಿಟ್ಟು ಬಿಡಿ. ವಿದ್ಯಾವಂತರೆನ್ನಿಸಿಕೊಂಡವರು, ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು ವಿಜ್ಞಾನವನ್ನು ತಿಳಿದು ಕೊಂಡವರು ಸಹ, ವಿಜ್ಞಾನದ ಸಕಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು “ಇದೊಂದು ಪ್ರಯತ್ನ” ಮಾಡಿಬಿಡೋಣ.. ಎಂದು ಈ ಪದ್ಧತಿಗೆ ಮೊರೆ ಹೋಗುವುದು ಒಂದು ವಿಚಿತ್ರವೇ ಸರಿ. ಮತ್ತೊಂದೆಂದರೆ ಇದರಲ್ಲಿ “ಸೈಡ್ ಎಫೆಕ್ಟ್ ಇಲ್ವಲ್ಲಾ. ಒಂದು ಸಲ ಪ್ರಯತ್ನಿಸಿದರೆ ತಪ್ಪೇನು?” ಎಂಬ ವಾದ. ಪಶುಗಳ ಚಿಕಿತ್ಸೆಯನ್ನು ಯಾರು ಬೇಕಾದರೂ ಮಾಡಬಹುದು ಎಂಬ ಭಾವನೆ, ಎಲ್ಲಾ ಕಡೆ ತಜ್ಞ ಪಶುವೈದ್ಯರ ಕೊರತೆ, ದುಬಾರಿಯಾಗುತ್ತಿರುವ ಔಷಧಿಗಳು ಇವೆಲ್ಲವೂ ಗೋಪಾಲಕರನ್ನು ಇತರೇ ಔಷಧಿ ಪದ್ಧತಿಗಳ ಕಡೆಗೆ ಸೆಳೆತ ಉಂಟಾಗುವಂತೆ ಮಾಡಿರುವುದು!! ಹಾಗೆಂದ ಮಾತ್ರಕ್ಕೆ ಆಧುನಿಕ ಪಶುವೈದ್ಯಕೀಯ ಪದ್ಧತಿಯಲ್ಲಿ ಲೋಪದೋಶಗಳು ಇಲ್ಲವೆಂದೇನೂ ಇಲ್ಲ. ವಾಣಿಜ್ಯೀಕರಣಗೊಂಡ ಯಾವುದೇ ವ್ಯವಹಾರವು ದಗಾ, ಮೊಸ,ವಂಚನೆಗಳಿಂದ ದೂರವಿಲ್ಲ. ಮೋಸ ಹೋಗುವುವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದನ್ನು ತಿದ್ದಲೆಂದೇ ಕಾನೂನು, ನ್ಯಾಯಾಲಗಳು ಇರುವುದು. ಇರುವ ವ್ಯವಸ್ಥೆಗಳಲ್ಲಿ ಪಶುವೈದ್ಯಕೀಯದಲ್ಲಿ ವೈಜ್ಞಾನಿಕವಾಗಿ ಸಾಬೀತು ಮಾಡಬಲ್ಲಂತಹ , ಕಣ್ಣಿಗೆ ಗೋಚರಿಸುವ ಪದ್ಧತಿಗಳನ್ನು ನಂಬಬೇಕೇ ಹೊರತು ಊಹೆ, ನಂಬಿಕೆ, ಕಲ್ಪನೆಯನ್ನೇ ಅವಲಂಭಿಸಿರುವ ಹೋಮಿಯೋಪತಿಯಂತ ಪದ್ಧತಿಯನ್ನು ಪಶುವೈದ್ಯಕೀಯದಲ್ಲಿ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?
೬. ಪಶುವೈದ್ಯರೇಕೆ ಹೋಮಿಯೋಪತಿಯ ಮೊರೆ ಹೋಗುತ್ತಾರೆ?
ಪಶುವೈದ್ಯಕೀಯದಲ್ಲಿ ಹೋಮಿಯೋಪತಿಯನ್ನು ಅಳವಡಿಸಬೇಕೆನ್ನುವವರ ಎರಡು ವರ್ಗಗಳಿವೆ. ಮೊದಲನೆಯದು ಕ್ಷೇತ್ರ ಮಟ್ಟದಲ್ಲಿರುವ ಪಶುವೈದ್ಯರದು. ಪ್ರಪಂಚದಲ್ಲಿರುವ ಅನೇಕ ಪಶುವೈದ್ಯಕೀಯ ಸಂಶೋಧಕ ಸಂಸ್ಥೆಗಳು,ವಿಜ್ಞಾನಿಗಳು ಸಂಶೋಧನೆ ಮಾಡಿ ಪಶುಗಳಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ಕಂಡು ಹಿಡಿದಿರುವುದನ್ನು ಪ್ರಾಣಿಗಳ ರೋಗ ಪತ್ತೆ ಮಾಡಿ ಅವುಗಳ ಕಾಯಿಲೆ ಗುಣ ಮಾಡುವುದು ಅವರ ಕಾರ್ಯ. ಎಲ್ಲಾ ಕಾಯಿಲೆಗಳಿಗೂ ಮದ್ದು ಕಂಡುಹಿಡಿಯುವುದು ಅಸಾಧ್ಯ. ಸಂಶೋಧಕರಿಗೆ ಪೂರಕ ಮಾಹಿತಿಯನ್ನು ಒದಗಿಸುವುದು ಇವರ ಕಾರ್ಯವೇ.. ಕ್ಷೇತ್ರಮಟ್ಟದಲ್ಲಿರುವ ಪಶುವೈದ್ಯರು ಎಲ್ಲವನ್ನೂ ಬಳಸಿ ಸೋತ ಮೇಲೆ “ಯಾವ ಪದ್ಧತಿಯಾದರೇನು? ಒಟ್ಟಿನಲ್ಲಿ ಕಾಯಿಲೆ ಕಡಿಮೆಯಾದರೆ ಸಾಕು” ಎಂಬ ಎಂದು ಬಸವಳಿದವರು. ಇದು ಸಹಜ ಸಹಾ. ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ ಎಂಬುದನ್ನು ಅಕ್ಷರಶ: ನಂಬುವ ಪರಿಸ್ಥಿತಿ ಕ್ಷೇತ್ರ ಮಟ್ಟದ ಪಶುವೈದ್ಯರಿಗಿರುತ್ತದೆ !. ಕೆಲವೊಮ್ಮೆ ಹೋಮಿಯೋಪತಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ತೆಗೆದುಕೊಂಡು ಏನಾಗಬೇಕು? ಒಟ್ಟಿನಲ್ಲಿ ಕಾಯಿಲೆ ವಾಸಿಯಾದರೆ ಸಾಕು ಎಂಬ ಮನೋಭಾವ ಇರುವುದು ಸಹಜ ಕೂಡಾ. ಆದರೆ ಆಧುನಿಕ ಪಶುವೈದ್ಯಕೀಯ ಪದ್ಧತಿಯಲ್ಲಿ ರೋಗ ಪತ್ತೆ ಮಾಡಿ, ಅದರ ಚಿಕಿತ್ಸೆಯ ಬಗ್ಗೆ ಚಿಂತಿಸುವ ಜವಾಬ್ದಾರಿ ಇರುತ್ತದೆ.
ಎರಡನೆಯದು ದೊಡ್ಡ ದೊಡ್ಡ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದರೂ ೨೦೦ ವರ್ಷಗಳ ಹಿಂದೆ ಕಂಡುಹಿಡಿದ್ದಕ್ಕೆ ಪುನ: ಮತ್ತೊಮ್ಮೆ ಪರೀಕ್ಷಿಸುವದೇಕೆ ಎಂಬ ವಾದ ಮಡಿಸುತ್ತಾ ಹೋಮಿಯೋಪತಿಯನ್ನು ಪ್ರಯೋಗಕ್ಕೆ ಒಳಪಡಿಸಿ ನಂತರ ಅದನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕೆಂಬ ಜವಾಬ್ಧಾರಿ ತೆಗೆದುಕೊಳ್ಳಲು ಇಚ್ಚಿಸದಿರುವವರು. ಇವರ ಸಂಖ್ಯೆ ಸಹಾ ದೊಡ್ಡದು !. ಆದರೆ ಗಮನಿಸಿದ ಒಂದು ಅಂಶವೆಂದರೆ ಇವರಾರೂ ಔಷಧವೈದ್ಯಶಾಸ್ತ್ರದ ಪ್ರಕಾರವೇ ಇದು ಔಷಧಿಯೆಂಬುದು ಸಿದ್ಧವಾಗಬೇಕೆಂದು ಗೊತ್ತಿರದವರು!. ಇವರಿಗೆ ಆಧುನಿಕ ಪಶುವೈದ್ಯಕೀಯ ಪದ್ಧತಿಯ ಔಷಧಗಳದು ಅಡ್ಡ ಪರಿಣಾಮ ಜಾಸ್ತಿ, ಜೀವ ನಿರೋಧಕದಂತಹ ಔಷಧಿಗಳು ಆಹಾರದಲ್ಲಿ, ಹಾಲಿನಲ್ಲಿ ಬಂದು ಬಿಡುತ್ತದೆ ಎಂಬ ಆತಂಕ!. ಇದೆಲ್ಲ ಒಂದಿಷ್ಟರ ಮಟ್ಟಿಗೆ ಸರಿಯಿದ್ದರೂ ಏನೂ ವೈಜ್ಞಾನಿಕ ಹಿನ್ನೆಲೆಯಿಲ್ಲದ ನಂಬಿಕೆಯ ಆಧಾರದ ಮೇಲೆಯೇ ನಿಂತಿರುವ ಹೋಮಿಯೋಪತಿಯನ್ನು ನೆಚ್ಚಿಕೊಳ್ಳುವುದ್ಯಾಕೋ ಅರ್ಥವಾಗ್ತಿಲ್ಲ. ಮನುಷ್ಯನಲ್ಲಿ ಶೇ ೨೦ ರಷ್ಟು ಖಾಯಿಲೆಗಳು ನರ ಮಾನಸಿಕ ಸಮಸ್ಯೆಗಳಾಗಿದ್ದು, ಒಂದಿಷ್ಟು ಕಾಯಿಲೆಗಳು ನಂಬಿಕೆಯ ಕಾರಣ ಸುಳ್ಳೌಷಧಿಯ ಪರಿಣಾಮದಿಂದ ಕಡಿಮೆಯಾಗಬಹುದು ಎನ್ನುತ್ತವೆ ಸಂಶೋಧನಾ ಲೇಖನಗಳು !!. ಆದರೆ ಪಶುಗಳಲ್ಲಿ ಈ ಸುಳ್ಳೌಷಧಿ ಪರಿಣಾಮ ಇಲ್ಲವೇ ಇಲ್ಲ ಎನ್ನಬಹುದು. ಕಾರಣ ಪಶುಗಳಲ್ಲಿ ಈ ಸುಳ್ಳೌಷಧ ಕೆಲಸ ಮಾಡುವುದೂ ಇಲ್ಲ ಎಂದರ್ಥ!.
೭.ಆಧುನಿಕ ಪಶುವೈದ್ಯಕೀಯದಲ್ಲಿ ಪದವಿ ಪಡೆದ ಪಶುವೈದ್ಯರು ಹೋಮಿಯೋಪತಿಯ ಔಷಧಗಳನ್ನು ನೀಡಬಹುದೇ?
ಖಂಡಿತ ಸಾಧ್ಯವೇ ಇಲ್ಲ. ಭಾರತ ದೇಶದ ಘನವೆತ್ತ ಸರ್ವೋಚ್ಚ ನ್ಯಾಯಾಲಯದ ಅನೇಕಾನೇಕ ತೀರ್ಪುಗಳು ಒಂದು ವಿಧದ ಚಿಕಿತ್ಸಾ ಪದ್ಧತಿಯಲ್ಲಿ ಪದವಿ ಪಡೆದವರು ಯಾವುದೇ ಕಾರಣಕ್ಕೆ ಮತ್ತೊಂದು ಪದ್ಧತಿಯ ಔಷಧ ಪದ್ಧತಿಯನ್ನು ಅನುಸರಿಸಬಾರದು. ಅದರಲ್ಲಿಯೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಪದವಿ ಪಡೆದವರು ಯಾವುದೇ ಕಾರಣಕ್ಕೂ ಇತರ ಪದ್ಧತಿಗಳಾದ ಆಯುರ್ವೇದ ಮತ್ತು ಹೋಮಿಯೋಪತಿಗಳ ಪದ್ಧತಿಯ ಔಷಧಿಗಳನ್ನು ಬಳಸುವುದಾಗಲೀ ಅಥವಾ ಅದನ್ನು ಬಳಸಬೇಕೆಂದು ಬರೆದುಕೊಡುವುದು ಕಾನೂನಿಗೆ ವಿರೋಧ. ಅಂತಹವರ ಮಾನ್ಯತೆಯನ್ನು ಸಂಬಂಧಿಸಿದ ವೈದ್ಯಕೀಯ ಪರಿಷತ್ತುಗಳು ರದ್ದು ಮಾಡಿ ಆತನ ಮೇಲೆ ಭಾರತೀಯ ದಂಡ ಸಂಹಿತೆಯ ಪ್ರಕಾರ ವೃತ್ತಿ ದ್ರೋಹ, ಮೋಸ, ವಂಚನೆ, ಪ್ರಾಣಹಾನಿ ಇತ್ಯಾದಿ ಕಲಮುಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂದಿದೆ. ಈ ಕುರಿತು ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ರಾಜ್ಯಗಳ ಉಚ್ಛನ್ಯಾಯಾಲಯಗಳ ತೀರ್ಪನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಭಾರತದ ಸಂಸತ್ತಿನಲ್ಲಿಯೂ ಸಹ ಈ ಕುರಿತು ಅನೇಕಾನೇಕ ಚುಕ್ಕೆ ಗುರುತಿನ ಪ್ರಶ್ನೆಗಳು, ಚರ್ಚೆಗಳಾಗಿದ್ದು ಸಂಸದರು ಕೋರಿದ ಮಾಹಿತಿಯನ್ನು ಸಂಬಂಧಿಸಿದ ವೈದ್ಯಕೀಯ ಪರಿಷತ್ತುಗಳು ಕಾನೂನು ಪ್ರಕಾರ ಈ ಕುರಿತು ಅವಕಾಶವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿವೆ. ಸರ್ವೋಚ್ಚ ನಾಯಾಲಯದ ಅನೇಕ ತೀರ್ಪುಗಳ ಪ್ರಕಾರ ಆಧುನಿಕ ಪಶುವೈದ್ಯಕೀಯ ಪದ್ಧತಿಯಲ್ಲಿ ಪದವಿ ಪಡೆದ ಪಶುವೈದ್ಯರು ಪಶುಚಿಕಿತ್ಸೆಯಲ್ಲಿ ಹೋಮಿಯೋಪತಿಯ ಬಳಕೆ ಕಾನೂನು ಪ್ರಕಾರ ಅಪರಾಧವಾದ. ಆದರೂ ಸಹ ಯಾರೂ ಈ ಕುರಿತು ಪ್ರಶ್ನಿಸದೇ ಇರುವುದರಿಂದ, ದೂರು ನೀಡದೇ ಇರುವುದೂ ಸಹ ಇದರ ಬಳಕೆಗೆ ಕಾರಣ. ವೃತ್ತಿಪರ ಪಶುವೈದ್ಯರು ನೀತಿಯ ಬಗ್ಗೆ ಪ್ರಮಾಣ ಮಾಡಿದ ಆಧುನಿಕ ಪಶುವೈದ್ಯಕೀಯ ಪದ್ಧತಿಯ ಪಶುವೈದ್ಯರು ಇದನ್ನು ಒಂದು ನೈತಿಕ ಸಂಹಿತೆಯಾಗಿ ತಿಳಿಯಬೇಕು. ಪಶುವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸುವ ಮೊದಲು ತೆಗೆದುಕೊಳ್ಳುವ ಪ್ರಮಾಣ ವಚನದಲ್ಲಿ “ ಪಶುವೈದ್ಯಕೀಯ ಔಷಧ ವೃತ್ತಿಯಲ್ಲಿ ಪ್ರವೇಶ ಪಡೆದ ನಾನು, ಈ ಮೂಲಕ ಕೈಗೊಳ್ಳುವ ಪ್ರಮಾಣವೆಂದರೆ, ವೈಜ್ಞಾನಿಕವಾಗಿ ದೃಢೀಕೃತವಾದ ಪಶುವೈದ್ಯಕೀಯ ಜ್ಞಾನ ಮತ್ತು ಕೌಶಲ್ಯಗಳನ್ನು ವಿವೇಚನೆಯಿಂದ ಬಳಸಿ ಪಶುಗಳ ಆರೋಗ್ಯದ ರಕ್ಷಣೆ, ಪ್ರಾಣಿಗಳ ಸಂಕಷ್ಟದ ಪರಿಹಾರ, ಜಾನುವಾರು ಸಂಪನ್ಮೂಲಗಳ ಸಂರಕ್ಷಣೆ, ಸಾರ್ವಜನಿಕ ಆರೋಗ್ಯದ ರಕ್ಷಣೆ ಮತ್ತು ಸಮಾಜದ ಹಿತದೃಷ್ಟಿಯಿಂದ ಬಳಸುವುದಾಗಿ ಪ್ರತಿಜ್ಞೆ ಮಾಡುತ್ತೇನೆ. ಆಧುನಿಕ ಪಶುವೈದ್ಯಕೀಯ ಜ್ಞಾನದ ಪ್ರಗತಿ ನನ್ನ ವೃತ್ತಿಯನ್ನು ಆತ್ಮಸಾಕ್ಷಿಯೊಂದಿಗೆ, ಘನತೆಯಿಂದ ಮತ್ತು ಪಶುವೈದ್ಯಕೀಯ ವೈದ್ಯಕೀಯ ನೀತಿಗಳ ತತ್ವಗಳಿಗೆ ಅನುಗುಣವಾಗಿ ಅಭ್ಯಾಸ ಮಾಡುತ್ತೇನೆ ಮತ್ತು ನನ್ನ ವೃತ್ತಿಪರ ಜ್ಞಾನ ಮತ್ತು ಸಾಮರ್ಥ್ಯದ ನಿರಂತರ ಸುಧಾರಣೆಯನ್ನು ನಾನು ಆಜೀವ ಬಾಧ್ಯತೆಯಾಗಿ ಸ್ವೀಕರಿಸುತ್ತೇನೆ” ಎಂದು ಪ್ರತಿಜ್ಞೆಯನ್ನು ಸ್ವೀಕರಿಸಿದ ಮೇಲೆ ಆಧುನಿಕ ಪಶುವೈದ್ಯಕೀಯ ವಿಜ್ಞಾನದಲ್ಲಿ ಪುರಾವೆ ಸಹಿತ ಸಾಬೀತಾದ ಜ್ಞಾನವನ್ನು ಪಶುಚಿಕಿತ್ಸೆಯಲ್ಲಿ ಬಳಸಬೇಕೇ ವಿನ: ಊಹಾಪೋಹಗಳು, ಕಲ್ಪನೆಗಳ ಆಧಾರಿತವಾದ ಯಾವುದೇ ಪದ್ಧತಿಯನ್ನು ಆಚರಿಸುವುದು ವೃತ್ತಿಗೆ ದ್ರೋಹದಂತೆ ಎಂಬುದು ಸಾರ್ವಜನಿಕ ಮಾನಿತ ಅಭಿಪ್ರಾಯ.
ಭಾರತ ದೇಶದಲ್ಲಾಗಲಿ ಅಥವಾ ಇತರ ದೇಶಗಳಲ್ಲಾಗಲೀ ಮಾನ್ಯತೆ ಪಡೆದ ಪಶುವೈದ್ಯಕೀಯ ಹೋಮಿಯೋಪತಿಯ ಪದವಿಗಳಿಲ್ಲ ಮತ್ತು ಹೋಮಿಯೋಪತಿ ಪಶುವೈದ್ಯಕೀಯ ಪರಿಷತ್ತೂಗಳೂ ಇಲ್ಲ. ಕಾರಣ ಈ ಪದ್ಧತಿಯಲ್ಲಿ ಮತ್ತೊಂದು ಪದವಿ ಪಡೆದಾದರೂ ಹೋಮಿಯೋಪತಿಯನ್ನು ಬರೆದುಕೊಡುವೆ ಎಂದರೆ ಅದಕ್ಕೂ ಅವಕಾಶಗಳಿಲ್ಲ. ಬ್ರಿಟನ್, ಅಮೇರಿಕಾ ಇತ್ಯಾದಿ ದೇಶಗಳಲ್ಲಿ ಪಶುವೈದ್ಯಕೀಯ ಹೋಮಿಯೋಪತಿಯವರ ಸಂಘಗಳಿದ್ದರೂ ಸಹ ಅದನ್ನು ಒಂದು ಹವ್ಯಾಸ ಅಥವಾ ಬದಲೀ ಪೂರಕ ಚಿಕಿತ್ಸೆಯೆಂದೇ ಪರಿಗಣಿಸಲಾಗುತ್ತಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ನೋಂದಾಯಿತ ಪಶುವೈದ್ಯರು ಪಶುಚಿಕಿತ್ಸೆಯಲ್ಲಿ ಹೋಮಿಯೋ ಪದ್ಧತಿಯನ್ನು ಅನುಸರಿಸಿದರೆ ಇದನ್ನು “ಕ್ವಾಕರಿ” ಎಂದು ಪರಿಗಣಿಸಬಹುದಾಗಿದೆ.
ಹಾಗಿದ್ದರೆ ಆಧುನಿಕ ಪದ್ಧತಿಯಲ್ಲಿ ಪದವಿ ಪಡೆದ ಪಶುವೈದ್ಯರು ರಾಜಾರೋಷವಾಗಿ ಹೋಮಿಯೋಪತಿ ಪದ್ಧತಿಗಳ ಬಗ್ಗೆ ಯಾವುದೇ ಅಧೀಕೃತ ವಿಧ್ಯಾಭ್ಯಾಸವಿಲ್ಲದಿದ್ದರೂ ಸಹ ಅನೇಕಾನೇಕ ಮಾಧ್ಯಮಗಳ ಮೂಲಕ, ವಾಹಿನಿಗಳ ಮೂಲಕ ಪಶುಚಿಕಿತ್ಸೆಯಲ್ಲಿ ಹೋಮಿಯೋಪತಿಯ ಪ್ರತಿಪಾದನೆ ಮಾಡುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಾರಣ ಈ ಕುರಿತು ಪಶುವೈದ್ಯಕೀಯ ಪರಿಷತ್ತಿಗೆ ದೂರು ದಾಖಲಾಗಬೇಕು ಮತ್ತು ಅದರ ಸೂಕ್ತ ವಿಚಾರಣೆಯಾದ ನಂತರ ಮುಂದಿನ ಕ್ರಮ. ಯಾರು ದೂರು ನೀಡುವುದು? ಜಾನುವಾರಿಗೆ ಚಿಕಿತ್ಸೆ ಪಡೆದ ಮಾಲಕರೇ? ವೃತ್ತಿ ಪರರೇ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದು ಬೇಕಿದೆ? ಅಷ್ಟಕ್ಕೂ ದೇಶದ ಕಾನೂನು ಪಾಲನೆ ಮಾಡದಿದ್ದರೆ ಏನೂ ಆಗುವುದಿಲ್ಲ ಎಂಬ ಭಾವನೆ ಇದ್ದರೆ ಕಷ್ಟ.
೮.ಉತ್ತಮವಾಗಿ ಕೆಲಸ ಮಾಡುತ್ತಿದೆ ಎನ್ನಲಾದ ಹೋಮಿಯೋಪತಿ ಔಷಧಿಯನ್ನು ಜಾನುವಾರು ಹಿತದೃಷ್ಟಿಯಲ್ಲಿ ಏಕೆ ಬಳಸಬಾರದು?
ಕೆಲವರಿಗೆ ಈ ಪ್ರಶ್ನೆ ಬರಬಹುದು. ಜಾನುವಾರುಗಳಿಗೆ ಒಳ್ಳೆಯದಾಗುವುದಾದರೆ ನಾನೇಕೆ ಇದನ್ನು ಬಳಸಬಾರದು? ನನ್ನ ಅನುಭವದಲ್ಲಿ ಅನೇಕಾನೇಕ ರಾಸುಗಳನ್ನು ಗುಣಪಡಿಸಿದ ಅನೇಕ ವರ್ಷಗಳ ಅನುಭವವಿದೆಯಲ್ಲ? ಎನ್ನುತ್ತಾರೆ ಕೆಲವರು. ಈ ದೇಶದ ನೆಲದ ಕಾನೂನಿಗೆ ಗೌರವ ನೀಡುವುದಾದರೆ ಈ ರೀತಿ ವಾದ ಸಲ್ಲದು. ಈ ಕುರಿತು ಪ್ರತಿ ಔಷಧಿಯ ಕ್ಷಮತೆಯ ಬಗ್ಗೆ, ಅಡ್ಡ ಪರಿಣಾಮಗಳ ಬಗ್ಗೆ, ಕಾರ್ಯ ನಿರ್ವಹಿಸುವ ವಿಧಾನದ ಬಗ್ಗೆ ಸಂಶೋಧನಾ ಸಂಸ್ಥೆಗಳಲ್ಲಿ ಕಾನೂನು ರೀತಿಯಲ್ಲಿ ಈ ಪದ್ಧತಿಯಲ್ಲಿ ಪದವಿ ಪಡೆದ ಪರಿಣಿತರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಅದು “ಔಷಧ”ವೆಂದು ಸಿದ್ಧವಾದರೆ ಮುಂದಿನದು ಎನ್ನುತ್ತದೆ ಕಾನೂನು. ನ್ಯಾಯಾಲಯಗಳ ತೀರ್ಪುಗಳಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ ಸಹ. ಆದರೆ ಸಂಶೋಧನೆ ಸುಲಭದ ಮಾತಲ್ಲ. ಅನೇಕಾನೇಕ ವರ್ಷಗಳ ಶ್ರಮ, ಹಣ, ತಾಳ್ಮೆ ಬೇಕು. ಅಷ್ಟಕ್ಕೂ ಮನುಜರಲ್ಲಿ “ಸುಳ್ಳೌಷಧಿ’ಯೆಂದು ಸಿದ್ಧವಾದ ಈ ಪದ್ಧತಿಗೆ ಸಂಶೋಧನೆಗೆ ಹಣ ನೀಡಲು ಯಾರು ಮುಂದೆ ಬಂದಾರು?
೯. ಪಶುವೈದ್ಯಕೀಯದಲ್ಲಿ ಯಾವ ಅರ್ಹತೆಯಿಲ್ಲದಿದ್ದರೂ ಸಹ ಕೆಲವರು ಹೋಮಿಯೋಪತಿ ಔಷಧಿಗಳನ್ನು ನೀಡುತ್ತಾರಲ್ಲ?
ನಿಜ. ಅನೇಕಾನೇಕ ಹವ್ಯಾಸಿಗಳು, ಹೋಮಿಯೋಪತಿ ಪ್ರಿಯರು ಪ್ರಾಣಿ ಪ್ರಿಯತೆಯ ಹೆಸರಿನಲ್ಲಿ ಪಶುವೈದ್ಯಕೀಯ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ. ಪಾರಂಪರಿಕ ಸಸ್ಯಜನ್ಯ ಗಿಡಮೂಲಿಕಾ ಔಷಧಿಗಳನ್ನು ಪ್ರಥಮ ಚಿಕಿತ್ಸೆಗೆ ಬಳಸುವುದು ಬಿಟ್ಟರೆ ಯಾವುದೇ ಪದ್ಧತಿಯಲ್ಲಿ ಪರಿಣಿತಿ ಇಲ್ಲದೇ ವಿವಿಧ ಪಶುಗಳ ಅಂಗ ರಚನೆ, ಜೀವ ರಸಾಯನಶಾಸ್ತ್ರ, ಔಷಧಶಾಸ್ತ್ರ ಇತ್ಯಾದಿಗಳ ಬಗ್ಗೆ ಏನೇನು ಅರಿವಿಲ್ಲದಿದ್ದರೂ ಸಹ ಕೇವಲ ನಂಬಿಕೆಯ ಆಧಾರದ ಮೇಲೆ ಔಷಧವಾಗಿ ಚಿಕಿತ್ಸೆಗೆ ಯಾವುದೇ ಪದ್ಧತಿಯ ಔಷಧಿಗಳನ್ನು ಬಳಸುವಂತೆಯೇ ಇಲ್ಲ!!. ಇದು ಶುದ್ಧ ಅನಧೀಕೃತ. ಇದು ಪ್ರಾಣಿ ರೋಗ ಪತ್ತೆ ವಿಧಾನ ಮತ್ತು ಚಿಕಿತ್ಸೆಯನ್ನು ತಪ್ಪುದಾರಿಗೆ ಎಳೆದಂತೆ ಎಂದು ಪರಿಗಣಿಸಿ ಪಶುಹಿಂಸಾ ಕಾನೂನಿನಡಿ ಶಿಕ್ಷೆಗೆ ಈಡು ಮಾಡಬಹುದಾಗಿದೆ. ಆದರೆ ಕಾನೂನಿನಡಿ ತರಬೇಕಾದರೆ ದೂರು ನೀಡಿ, ಸಾಕಷ್ಟು ಸಾಕ್ಷಿ ಪುರಾವೆಗಳನ್ನು ನೀಡಿದರೆ ಮಾತ್ರ ಇದು ಸಾಧ್ಯ. ಮತ್ತದೇ ಪ್ರಶ್ನೆ..ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಪಶುವೈದ್ಯಕೀಯದಲ್ಲಿ ಹೋಮಿಯೋಪತಿಯ ಉಪಯೋಗದ ಬಗ್ಗೆ ಸಮಗ್ರ ಸಮೀಕ್ಷೆಯನ್ನು ಮಾಡಿದ ಇತ್ತೀಚಿನ ವೈಜ್ಞಾನಿಕ ಲೇಖನದ ಪ್ರಕಾರ “ಹೋಮಿಯೋಪತಿ ಪದ್ಧತಿಯಲ್ಲಿ ಜಾನುವಾರುಗಳನ್ನು ಗುಣಮಾಡುವ ಬಗ್ಗೆ ಅನೇಕ ಹಕ್ಕು ಪ್ರತಿಪಾದನೆಗಳಿದ್ದರೂ ಸಹ ಇವೆಲ್ಲ ಊಹೆಗಳ ಮೇಲೆ ಅವಲಂಭಿಸಿದ್ದು ಇದಕ್ಕೆ ಸಂಶೋಧನಾ ದೃಢೀಕರಣದ ಅವಶ್ಯಕತೆ ಇದೆ.ಈವರೆಗೂ ಆದ ಸಂಶೋಧನೆಗಳನ್ನು ಗಮನಿಸಿದಾಗ ಅವೆಲ್ಲಾ ಒಂದೆರಡು ಪ್ರಾಣಿಗಳ ಕಾಯಿಲೆಗಳ ಚಿಕಿತ್ಸೆಯನ್ನು ಅವಲಂಭಿಸಿದ್ದು ಈ ಸಂಶೋಧನೆಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಪ್ರಾಣಿಗಳ ಕಲ್ಯಾಣದ ದೃಷ್ಟಿಯಿಂದ, ಅವುಗಳ ಮೇಲೆ ಈಗಾಗಲೇ ವೈಜ್ಞಾನಿಕ ಪದ್ಧತಿಯಲ್ಲಿ ಸಿದ್ಧಗೊಂಡ ಪರಿಣಾಮಕಾರಿ ಔಷಧಿಗಳನ್ನು ಪ್ರಥಮ ಆಯ್ಕೆಯಾಗಿ ಪ್ರಯೋಗಿಸಬೇಕೇ ವಿನ: ಊಹಾಪೋಹಗಳ ಆಧಾರದ ಮೇಲೆ, ನಂಬಿಕೆಯ ಆಧಾರದ ಮೇಲೆ ಅವುಗಳ ಚಿಕಿತ್ಸೆ ಮಾಡ ಹೊರಟರೆ ಅದನ್ನು ಪ್ರಾಣಿ ಹಿಂಸೆ ಎಂದೇ ಪರಿಗಣಿಸಬೇಕಾಗುತ್ತದೆ.ಪಶುಗಳಲ್ಲಿ ಹೋಮಿಯೋಪತಿ ಪದ್ಧತಿಯ ಔಷಧಿಗಳ ಬಳಕೆ ೨೦೦ ವರ್ಷಗಳಿಂದ ಚಾಲ್ತಿಯಲ್ಲಿದ್ದರೂ ಸಹ ಅವುಗಳ ಪರಿಣಾಮಕತೆ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟ ಹೊರತು ಅದನ್ನು ಪಶುಚಿಕಿತ್ಸೆಯಲ್ಲಿ ಬಳಸುವುದು “ಅನೈತಿಕ” ವೆಂದೇ ಪರಿಗಣಿತವಾಗುತ್ತದೆ.ಇವುಗಳ ಪರಿಣಾಮದ ಬಗ್ಗೆ, ಸುರಕ್ಷತೆಯ ಬಗ್ಗೆ, ಕಾರ್ಯ ನಿರ್ವಹಿಸುವ ವಿಧಾನದ ಬಗ್ಗೆ ಸೂಕ್ತವಾದ ನಿಯಂತ್ರಣ ಗುಂಪನ್ನು ಹೊಂದಿದ ಸುಳ್ಳೌಷಧಿ ಸಮೇತದ ದ್ವಿಮುಖ ಪ್ರಯೋಗಳು ಬರದ ಹೊರತು ಇವುಗಳನ್ನು ಬಳಸದೇ ಇರುವುದು ಒಳಿತು” ಎನ್ನುತ್ತದೆ.
ಸಾರ್ವಜನಿಕರಲ್ಲಿ ಈ ಕುರಿತು ಜಾಗ್ರತಿ ಮೂಡಿ, ಅವರ ಜಾನುವಾರಿಗೆ ವೈಜ್ಞಾನಿಕ ವಿಧಾನದಿಂದ ರೋಗ ಪತ್ತೆಯಾಗಿ ಅದಕ್ಕೆ ಸೂಕ್ತವಾದ ಪದ್ಧತಿಯಲ್ಲಿ ನಿಖರವಾದ ಚಿಕಿತ್ಸೆಯಾಗಿದೆಯೇ? ಎಂದು ಪ್ರಶ್ನಿಸುವ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕತೆ ಬಂದಾಗ ಮಾತ್ರ ಇದನ್ನು ಕಾನೂನಿನ ಚೌಕಟ್ಟಿನಲ್ಲಿ ತರಲು ಸಾಧ್ಯ. ಕಾದು ನೋಡೋಣ..
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಲೇಖನಕ್ಕೆ ಅಧ್ಯಯನ ಮಾಡಿದ ಆಕರಗಳು;
1. DOEHRING, C. AND SUNDRUM, A. 2016. Efficacy of homeopathy in livestock according to peer-reviewed publications from 1981 to 2014. Veterinary Record, 17;179(24):628-641
2. GULATI CM. Warning to prescribers. MIMS(R) India. Monthly Index of Medical Specialties 2006;26:16.
3. KOWALSKI, M., 1989. Homöopathische Arzneimittelanwendung in der veterinärmedizinischen Literatur: Eine Diskussion der bisher publizierten Wirksamkeitsnachweise. [Use of homeopathy in veterinary literature]. PhD thesis, Free University of Berlin, Germany.
4. LEES P, PELLIGAND L, WHITING M, CHAMBERS D, TOUTAIN PL, WHITEHEAD ML., 2017.Comparison of veterinary drugs and veterinary homeopathy: Part 1. Vet Rec. 181(7):170-176
5. LINDE K, CLAUSIUS N, RAMIREZ G ,1997. Are the clinical effects of homeopathy placebo effects? A meta-analysis of placebo-controlled clinical trials.Lancet, 350:834–843.
6. MADREWAR, B.P. ,2009, Therapeutics of Veterinary Homeopathy. B.Jain Large Print; Second edition.
7. MALLICK, M.R., 2006. THE DRUG AND COSMETICS ACT, 1940. In, Criminal Minor Acts, editor Mallick MR, New Delhi Professional Book publishers 2006;439-485.
8. MCMILLAN, F.D., 1999. The placebo effect in animals.J Am Vet Med Assoc., 215:992–999.
9. MEDICAL COUNCIL OF INDIA. Clause 1.1.3 of MCI prohibits the allopathic practitioners to prescribe ayurvedic or homoeopathic drugs.
10. PAUL Y. Cross System Practice and Prescription. Indian Pediatr 2010;47: 199.
11. PROFESSIONAL BLOG OF INDIAN YOUNG PARASITOLOGISTS, 2018. Can a veterinarian do homeopathic animal treatment under vet law http://indianparasitologists.blogspot.com/2018/04/can-veterinarian-do-homeopathic-animal.html
12. RIJNBERK and DW RAMEY 2007. The end of veterinary homeopathy. Aust Vet J 2007;85:513–516
13. ROBERT T MATHIEL,, DANIELA HACKE and JURGEN CLAUSEN, 2012. Randomised controlled trials of veterinary homeopathy: Characterising the peer-reviewed research literature for systematic review. Homeopathy, 101:196-203
14. SATOSKAR RS, BHANDARKAR SD, REGE NN. General considerations and pharmacokinetics. In, Pharmacology and pharmaco-therapeutics, editors Satoskar RS, Bhandarkar SD, Rege NN; 20th edition Mumbai Popular Prakashan 2007;1-25.
15. THE SUPREME COURT JUDGEMENT: A person can practice only that therapy for which he/she has a degree / recognised qualification or experience.
16. THE SUPREME COURT OF INDIA CIVIL APPELLATE JURISDICTION Civil Appeal No.603 of 2020 (Arising out of SLP (C) No.26267 of 2019). UNION OF INDIA .... Appellant(s) Versus FEDERATION OF SELF-FINANCED AYURVEDIC COLLEGES PUNJAB & ORS. …. Respondent (s)
17. THE SUPREME COURT OF INDIA CIVIL APPELLATE JURISDICTIONCIVI L APPEA L NO. 4049 O F 2020 (arising out of SLP (C) No. 15293/2020 Diary No. 19638 of 2020)
18. THE SUPREME COURT OF INDIA;Poonam Verma vs Ashwin Patel & Ors on 10 May, 1996: Equivalent citations: 1996 AIR 2111, 1996 SCC (4) 332
19. VAN SLUIJS, F.J. 2004. Kan de homeopathie de toets der wetenschap doorstaan? Tijdschr Diergeneeskd;127:295–298. English translation in: Veterinary Science Tomorrow: Can homeopathy withstand scientific testing? http://www.vetscite.org/publish/articles/000051/article.html.
20. VERMA U, SHARMA R, GUPTA P, GUPTA S, KAPOOR B. Allopathic VS Ayurvedic practices in tertiary care institutes of Urban North India. Indian J Pharmcol 2007;39:52-54.
21. YASH PAUL and SATISH TIWARI,2014. Issues to settle- Cross System Medical Practice. Journal of Association of Physicians of India, 62:156-159
22. WENDY THACHER JENSEN, 2015. Practical Handbook of Veterinary Homeopathy: Healing Our Companion Animals from the Inside. Black Rose Writing; First Printing ed. edition.
Click here to claim your Sponsored Listing.
Videos (show all)
Category
Contact the public figure
Website
Address
Shimoga
577205
Shimogga
Shimoga, 577203
we can fly without knowledge but not without technology
Shimoga
https://twitter.com/HsSundareshinc?t=Vd17KdIsBsEwDjTZQGJPNg&s=09 Follow me on Twitter
Shimoga
Shimoga
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಜಿ. ಪಂ. ಶಿವಮೊಗ್ಗ ಹಾಗೂ ಜಿ. ಪಂ. ಸದಸ್ಯರು, ಹೊಳಲೂರು
Shimoga
Wedding is a divine union of two souls. We are delighted to make it the traditional Banjara way.
Shimoga
Page is basically to empower women nd students through positive thinking, mindset, right programming of mind through powerful motivational videos with real life stories through m...