Vishweshwar Bhat

Vishweshwar Bhat

Editor in Chief, Vishwavani Daily,

Photos from Vishweshwar Bhat's post 31/03/2024

ಇಂಡೋನೇಷಿಯಾದ ಬಾಲಿಯಲ್ಲಿ ನಾನು ಉಳಿದುಕೊಂಡ ಹೋಟೆಲ್ ರೂಮ್ ಬ್ಲಾಕ್ ಹೆಸರುಗಳೆಲ್ಲ ಸರಸ್ವತಿ, ರುಕ್ಮಿಣಿ, ಪಾರ್ವತಿ, ಲಕ್ಷ್ಮೀ, ಶ್ರೀ…ರೆಸ್ಟೋರೆಂಟ್ ಹೆಸರು - ಗಣೇಶ್ ಏಕ್ ಸಂಸ್ಕೃತಿ. ಎಲ್ಲರೂ ಮಾತಾಡಿಸುವುದು ಓಂ ಸ್ವಸ್ತಿ ಎಂದು.. ಮಾತು ಮುಗಿಸುವಾಗ ಓಂ ಶಾಂತಿ.. ಸನಾತನ ಧರ್ಮವೇ ನಮ್ಮ ಆಧಾರ ಅಂತ ಅಭಿಮಾನದಿಂದ ಹೇಳುತ್ತಾರೆ. ಅಷ್ಟಕ್ಕೂ ಇದು ಮುಸ್ಲಿಂ ದೇಶ!

Photos from Vishweshwar Bhat's post 28/03/2024

ಒಂದು ತಿಂಗಳು ಎಲ್ಲಿಗೂ ಹೋಗಿರಲಿಲ್ಲ.

ಅದನ್ನೇ ಕೆಲವರು, “ಏನು ಎಲ್ಲೂ ಹೋಗ್ತಾ ಇಲ್ಲವಾ? Hope everything is fine with you” ಎಂದು ಕೇಳಲಾರಂಭಿಸಿದರು.

ಇಂಡೋನೇಷಿಯಾದ ಬಾಲಿಗೆ ಹೋಗಿ ಬರೋಣ ಅನಿಸ್ತು!

ವಿಮಾನ ನಿಲ್ದಾಣಕ್ಕೆ ಬಂದಾಗ ಗೊತ್ತಾಯ್ತು … ಇಂದೇ ಬೆಂಗಳೂರು - ಬಾಲಿ ಡೈರಕ್ಟ್ ಫ್ಲೈಟ್ ಆರಂಭ ಅಂತ. ಇನ್ನು ಮುಂದೆ ದಿನವೂ ಈ ಸೇವೆ ಲಭ್ಯ. ಮೊದಲಾಗಿದ್ದರೆ, ಬೆಂಗಳೂರಿಜಿಂದ ಸಿಂಗಪುರ/ ಕೌಲಾಲಾಂಪುರ/ ಬ್ಯಾಂಕಾಕ್ ಮೂಲಕ ಹೋಗಬೇಕಿತ್ತು. ಈಗ ನೇರ ನಾನ್ ಸ್ಟಾಪ್ ಪ್ರಯಾಣ.

ಒಂದು ವಾರ ಬೆಂಗಳೂರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ. 😀

Photos from Vishweshwar Bhat's post 26/03/2024

ಮೊನ್ನೆ ಬೆಳಗಾವಿಯಲ್ಲಿ ಒಂದು ಅಪರೂಪದ ಕಾರ್ಯಕ್ರಮ. ರಾಜ್ಯಸಭಾ ಸದಸ್ಯೆಯಾಗಿ ನಮ್ಮ ನಿರ್ದೇಶನಗೊಂಡ ಬಳಿಕ ಅವರ ಮೊದಲ ಸಾರ್ವಜನಿಕ ಕಾರ್ಯಕ್ರಮ. ಸುಧಾಮೂರ್ತಿಯವರೊಂದಿಗೆ ಮಾತು, ಸಂವಾದ, ಸೆಲ್ಫಿ ಮತ್ತು ಹಸ್ತಾಕ್ಷರ. ಅವರ ಮನದ ಮಾತು. ನನ್ನ ಮೊದಲ ಮಾತು. ಸಪ್ನ ಬುಕ್ ಹೌಸ್ ಬೆಳಗಾವಿ ಶಾಖೆ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಬೆಳಗಾವಿಯ ಅಕ್ಷರ ಪ್ರೇಮಿಗಳೊಂದಿಗೆ ಕಳೆದ ಕ್ಷಣ ಸ್ಮರಣೀಯ.

24/03/2024

ಇಂದು ಬೆಳಗಾವಿಯಲ್ಲಿ ಹೀಗೊಂದು ಕಾರ್ಯಕ್ರಮ. ಬನ್ನಿ

23/03/2024

Ask The Editor ಅಂಕಣ :

* ಪ್ರಭಾಕರ ಕೆ. ಮರುಳಯ್ಯ, ತುಮಕೂರು

ಭಟ್ರೇ, ನನ್ನನ್ನು ನನ್ನ ಸ್ನೇಹಿತರು ಬಳಸಿಕೊಂಡು ಬಿಸಾಡುತ್ತಿದ್ದಿರಬಹುದಾ ಎಂಬ ಸಂದೇಹ ಕಾಡುತ್ತಿದೆ. ಕಾರಣ ಕಳೆದ ನಾಲ್ಕು ತಿಂಗಳುಗಳಿಂದ ಅವರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಒಂದು ವೇಳೆ ಇದು ನಿಜವಾಗಿದ್ದರೆ ಅವರ ಬಗ್ಗೆ ನನ್ನ ಧೋರಣೆ ಹೇಗಿರಬೇಕು?

- ಪ್ರಭಾಕರ ಅವರೇ, ಒಂದು ಸಂಗತಿಯನ್ನು ತಿಳಿದುಕೊಳ್ಳಿ, ಎಲ್ಲಿಯ ತನಕ ನೀವು ಬಲಿಷ್ಠರಾಗಿರುತ್ತೀರೋ, ಸಮರ್ಥರಾಗಿರುತ್ತೀರೋ, ಉಪಯುಕ್ತರಾಗಿ ಇರುತ್ತೀರೋ, ಅಲ್ಲಿ ತನಕ ಯಾರೂ ನಿಮ್ಮನ್ನು ಕಡೆಗಣಿಸುವುದಿಲ್ಲ. ವಯಸ್ಸಾದ ಗೊಡ್ಡು ಆನೆಗೂ ಹುಲ್ಲು ಹಾಕುತ್ತಾರೆ. ಕಾರಣ ಅದು ಸತ್ತ ಬಳಿಕ ಉಪಯೋಗಕ್ಕೆ ಬಂದೀತು ಎಂಬುದು ಲೆಕ್ಕಾಚಾರ. ನೀವು ಯಾರಿಗೂ ಬೇಡವಾಗುವುದು, ನೀವು ಎಲ್ಲ ದೃಷ್ಟಿಯಿಂದ ನಿರುಪಯುಕ್ತರಾದಾಗ. ನಿಮ್ಮಿಂದ ದಮಡಿ ಕಾಸು ಪ್ರಯೋಜನ ಇಲ್ಲ ಅಂದ್ರೆ ನಿಮ್ಮ ಕಡೆ ಕತ್ತೆತ್ತಿ ನೋಡುವುದಿಲ್ಲ.

ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಟ್ಟರೂ ಆದೀತು, ಕೊಡದಿದ್ದರೂ ಆದೀತು ಎಂಬ ಭಾವನೆ ಬಂದರೆ, ಯಾರೂ ನಿಮಗೆ ಟಿಕೆಟ್ ಕೊಡುವುದಿಲ್ಲ. ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ ಗೆ ಆದ ಸ್ಥಿತಿಯೇ ನಿಮಗೂ ಆಗುತ್ತದೆ. ಆಕೆಗೆ ಟಿಕೆಟ್ ಕೊಡದಿದ್ದರೆ ಏನೂ ಆಗುವುದಿಲ್ಲ ಎಂದು ಗೊತ್ತಾಗಿದ್ದರಿಂದಲೇ ಅದನ್ನು ಕೊಡಲಿಲ್ಲ.

ಏನೇ ಬರಲಿ, ನೀವು ಕೆಲಸಕ್ಕೆ ಬಾರದವರು, ನಿಷ್ಪ್ರಯೋಜಕರು ಎಂದು ಅನಿಸಿಕೊಳ್ಳಬಾರದು. ಸದಾ ಪ್ರಸ್ತುತರಾಗಿರುವುದು ಹೇಗೆ, ಚಲಾವಣೆಯಲ್ಲಿರುವುದು ಹೇಗೆ ಎಂದು ನೋಡಬೇಕು. ರಾಣಿ ಜೇನುಹುಳು ಆಗುವುದನ್ನು ಕರಗತ ಮಾಡಿಕೊಳ್ಳಬೇಕು. ಆಗ ಗೂಡಿನಲ್ಲಿರುವ ಜೇನುಗಳೆಲ್ಲ ರಾಣಿಹುಳುವಿನ ಸುತ್ತ ಸುತ್ತುತ್ತಿರುತ್ತವೆ. ರಾಣಿಪಟ್ಟ ಹೋದರೆ, ಉಳಿದ ಹುಳುಗಳೇ ಕಚ್ಚಿ ಸಾಯಿಸಿಬಿಡುತ್ತವೆ.

ಭಯೋತ್ಪಾದಕರ ನಾಯಕ ನರಪೇತಲನಾಗಿರುತ್ತಾನೆ. ಅವನನ್ನು ಕಾಯುವವರು ದಷ್ಟ-ಪುಷ್ಟ ಬಂದೂಕುಧಾರಿಗಳಾಗಿರುತ್ತಾರೆ. ಅಂಗರಕ್ಷಕರೇ ನಾಯಕನನ್ನು ಹೊಡೆದು ಸಾಯಿಸಿಬಿಡಬಹುದು. ಆದರೆ ಅವನನ್ನು ಕಾಯುವುದರಲ್ಲೇ ತಮ್ಮ ಜೀವನದ ಸಾರ್ಥಕ್ಯ ಅಡಗಿದೆ ಎಂಬ ಭಾವನೆಯನ್ನು ನಾಯಕ ತುಂಬಿರುತ್ತಾನೆ. ಈ ನಾಯಕನಿಂದ ನಮಗೇನೂ ಆಗುವುದಿಲ್ಲ ಎಂದು ಅನಿಸಿದ ಕ್ಷಣವೇ ಸುತ್ತಲಿರುವವರೇ ಹೊಡೆದು ಸಾಯಿಸಿಬಿಡುತ್ತಾರೆ.

ನೀವೂ ನಿಮ್ಮ ಸ್ನೇಹಿತರಿಗೆ ಏನಾಗಿದ್ದೀರಿ ಎಂಬುದನ್ನು ಯೋಚಿಸಿ. ಅವರಿಗೆ ನಿಮ್ಮಿಂದ ಏನೂ ಪ್ರಯೋಜನ ಇಲ್ಲ ಅಂತಾದರೆ, ಬಿಜೆಪಿಯವರು ಸುಮಲತಾಳನ್ನು ಬಿಟ್ಟಂತೆ, ದೊಡ್ಡಗೌಡರು ಸಿ.ಎಂ.ಇಬ್ರಾಹಿಂ ಬಿಟ್ಟಂತೆ, ತುದಿ ಬೆರಳಿನಲ್ಲಿ ಬಿಟ್ಟು ನಿರುಮ್ಮಳರಾಗಿಬಿಡುತ್ತಾರೆ.

ನಾವು ಯಾವತ್ತೂ ನಮ್ಮ ಮಹತ್ವವನ್ನು ಕಾಪಾಡಿಕೊಳ್ಳಬೇಕು. ಆಕಾಶದಲ್ಲಿರುವ ನಕ್ಷತ್ರವಾಗಲು ಆಗದಿದ್ದರೆ, ಅದನ್ನು ನೋಡುವ ದುರ್ಬೀನಾದರೂ ಆಗಬೇಕು. ನೀವು ಪ್ರಸ್ತುತರಾಗುವುದು ಹೇಗೆ ಎಂಬ ಬಗ್ಗೆ ಯೋಚಿಸಿ.

**

* ವೈಷ್ಣವಿ ವಿ., (ಇಮೇಲ್ ಮೂಲಕ)

ಭಟ್ರೇ, ನನಗೆ ಮದುವೆ ಅಂದ್ರೆ ಸ್ವಲ್ಪವೂ ಇಷ್ಟವಿಲ್ಲ. ಆದ್ರೆ ನನ್ನ ತಂದೆ-ತಾಯಿ ಮದುವೆಯಾಗಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಮದುವೆಯಾಗುವುದು ಅಂದ್ರೆ ನನ್ನತನವನ್ನು ಕಳೆದುಕೊಂಡಂತೆ ಎಂಬುದು ನನ್ನ ಬಲವಾದ ನಂಬಿಕೆ. ಮದುವೆಯಾಗದೇ ಸಾರ್ಥಕ ಜೀವನ ನಡೆಸಬೇಕು ಎಂಬುದು ನನ್ನ ಯೋಚನೆ. ಇದು ಸಾಧ್ಯವೇ? ನನ್ನ ನಿಲುವನ್ನು ಪಾಲಕರಿಗೆ ಸರಿಯಾಗಿ ತಿಳಿಸುವುದು ಹೇಗೆ?

- ವೈಷ್ಣವಿ ಅವರೇ, ಮದುವೆ ಎಂಬುದು ತೀರಾ ವೈಯಕ್ತಿಕ ನಿರ್ಧಾರ. ಮನುಷ್ಯನಾಗಿ ಹುಟ್ಟಿದವರು ಮದುವೆಯಾಗಲೇಬೇಕು ಎಂಬ ನಿಯಮವೇನಿಲ್ಲ. ಮದುವೆ ಎಂಬುದು ನಮ್ಮ ಅನುಕೂಲಕ್ಕೆ ಮಾಡಿಕೊಂಡ ಒಂದು ಅರೇಂಜ್ಮೆಂಟ್. ಮದುವೆ ಆಗದಿದ್ದವರಲ್ಲಿ ನೀವು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ.

ಮದುವೆಯಾದವರೆಲ್ಲ, ಮದುವೆ ಆಗದಿದ್ದರೇ ಚೆನ್ನಾಗಿತ್ತು ಎಂದು ಅಂದುಕೊಳ್ಳುವುದು ಸಹಜವೇ. A man without a woman is a bachelor. A woman without a man is a genius ಎಂಬ ಮಾತನ್ನು ಕೇಳಿರಬಹುದು. ಅಂದರೆ ನೀವು ಈ ಜೀವನದಲ್ಲಿ ಜೀನಿಯಸ್ (ಮಹಾನ್ ಪ್ರತಿಭೆ) ಆಗಲು ಅವಕಾಶವಿದೆ ಎಂದಂತಾಯಿತು.

ನಿಮ್ಮ ಈ ನಿರ್ಧಾರದಿಂದ ನಿಮ್ಮ ತಂದೆ-ತಾಯಿಗೆ ಸ್ವಲ್ಪ ಬೇಸರವಾಗಬಹುದು. 'ನೀವಿಬ್ಬರೂ ನನ್ನ ಹಾಗೆ ಮದುವೆಯಾಗದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ನಾನು ಹುಟ್ಟುತ್ತಲೇ ಇರಲಿಲ್ಲ. ಆ ಮೂಲಕ ಈ ಸಮಸ್ಯೆ ಉದ್ಭವಿಸುತ್ತಲೇ ಇರಲಿಲ್ಲ. ಹೀಗಾಗಿ ಈ ಸಮಸ್ಯೆಗೆ ನೀವೇ ಕಾರಣ, ನಾನಲ್ಲ' ಎಂದು ಅವರಿಗೆ ಹೇಳಿ.

ಮದುವೆಯಾಗದಿರುವ ನನ್ನ ನಿರ್ಧಾರವನ್ನು ಗೌರವಿಸಿ ಎಂದು ಅವರಿಗೆ ಮನವರಿಕೆ ಮಾಡಿಕೊಡಿ. ಮದುವೆಯಾಗದೇ ಸಾರ್ಥಕ ಜೀವನ ಸಾಗಿಸಿದ ಮಹಿಳೆಯರ ಕುರಿತು ಹೇಳಿ.

ಇಷ್ಟಾದರೂ ಅವರಿಗೆ ಮನವರಿಕೆಯಾಗದಿದ್ದರೆ, ಮಾಯಾವತಿ, ಮಮತಾ ಬ್ಯಾನರ್ಜಿ, ಜಯಲಲಿತಾ, ಸೆಲ್ಜಾ ಕುಮಾರಿ, ಶೋಭಾ ಕರಂದ್ಲಾಜೆ ಅವರ ಜೀವನ-ಸಾಧನೆ ಬಗ್ಗೆ ತಿಳಿಸಿಕೊಡಿ. ಅವರು ನಿಮ್ಮ ಜತೆ ಇನ್ನು ಮುಂದೆ ಮದುವೆಗೆ ಒತ್ತಾಯಿಸಲಿಕ್ಕಿಲ್ಲ.

**

21/03/2024

ರಾಜಕಾರಣದಲ್ಲಿ ಸದಾ ಅಯೋಗ್ಯರು, ಅಪಾತ್ರರು ಸಲ್ಲುತ್ತಾರೆ, ಏಕೆ?
- ವಿಶ್ವೇಶ್ವರ ಭಟ್ I ನೂರೆಂಟು ವಿಶ್ವ I ವಿಶ್ವವಾಣಿ

ಎಲ್ಲ ರಾಜಕೀಯ ಪಕ್ಷಗಳ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಮಂಡೆಬಿಸಿ ಮಾಡಿಕೊಂಡು ಕುಳಿತಿದ್ದಾರೆ. ಪ್ರತಿ ಕ್ಷೇತ್ರದ ಟಿಕೆಟ್ ಹಂಚುವಾಗಲೂ ಅಳೆದು, ತೂಗಿ, ಸುರಿದು, ಮುರಿದು ನೋಡುತ್ತಿದ್ದಾರೆ. ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುವುದು ಬಹಳ ಸುಲಭ ಅಥವಾ ಬಹಳ ಕಷ್ಟ. ಒಬ್ಬರಿಗೆ ಟಿಕೆಟ್ ನೀಡುವಾಗ ನಾಯಕರು ಹತ್ತಾರು ಅಂಶಗಳನ್ನು, ನೂರಾರು ಸಂಗತಿಗಳನ್ನು ಪರಿಗಣಿಸುವುದು ಇದ್ದಿದ್ದೇ. ಒಬ್ಬರೇ ನಿರ್ಧಾರ ಮಾಡುವ ಸಂದರ್ಭದಲ್ಲೂ, ಅಭ್ಯರ್ಥಿಗಳ ಆಯ್ಕೆ ಸುಲಭವಲ್ಲ. ಹೀಗಿರುವಾಗ ಹತ್ತಾರು ನಾಯಕರನ್ನೊಳಗೊಂಡ ಸಮಿತಿ ನಿರ್ಧಾರ ತೆಗೆದುಕೊಳ್ಳುವಾಗ ಚರ್ಚೆ, ವಿನಿಮಯ, ಗೊಂದಲ, ಹಗ್ಗ-ಜಗ್ಗಾಟ, ಲೆಕ್ಕಾಚಾರ, ಪೈಪೋಟಿಗಳು ಆಗಲೇಬೇಕು. ಅದರಲ್ಲೂ ಗೆಲ್ಲುವ ಅವಕಾಶಗಳು ಹೆಚ್ಚಿರುವ ಪಕ್ಷಗಳಲ್ಲಿ ಗೊಂದಲಗಳ ಪ್ರಮಾಣ ಮತ್ತು ತೀವ್ರತೆಯೂ ಹೆಚ್ಚೇ. ಅಭ್ಯರ್ಥಿಗಳ ಆಯ್ಕೆ ಸಮರ್ಪಕ ಹೌದೋ, ಅಲ್ಲವೋ ಎಂಬುದು ನಿರ್ಧಾರವಾಗುವುದು ಫಲಿತಾಂಶ ಬಂದ ನಂತರವೇ. ಅಲ್ಲಿಯ ತನಕ ಚರ್ಚೆ ಮಾತ್ರ ಮುಂದುವರಿದಿರುತ್ತದೆ.

ಆದರೆ ಯಾರಿಗೂ ಅರ್ಥವಾಗದ ಒಂದು ಸಂಗತಿಯೊಂದಿದೆ. ಅದು ಮಾನದಂಡದ ಪ್ರಶ್ನೆ. ಯಾವುದೇ ಪಕ್ಷ ಒಂದು ನಿರ್ದಿಷ್ಟ ಮಾನದಂಡವನ್ನು ಎಲ್ಲ ಅಭ್ಯರ್ಥಿಗಳ ಆಯ್ಕೆಯಲ್ಲೂ ಅನುಸರಿಸಬೇಕು. ಆದರೆ ಎಲ್ಲ ಪಕ್ಷಗಳೂ ಈ ನಿಯಮವನ್ನು ಉಲ್ಲಂಘಿಸುವ ಮೂಲಕವೇ ಆಚರಿಸುತ್ತವೆ ಎಂಬುದು ಗೊತ್ತಿರುವ ವಿಚಾರವೇ. ಬಿಜೆಪಿ ಪಾಲಿಗೆ ಅಭ್ಯರ್ಥಿ ಮುಖ್ಯವಲ್ಲ. ಮೋದಿ ಹೆಸರಲ್ಲಿ ಯಾರೇ ಮತ ಕೇಳಿದರೂ ಅವರು ಗೆಲ್ಲುತ್ತಾರೆ ಎಂಬ ಪ್ರತೀತಿಯಿದೆ. ಆದರೂ ಆ ಪಕ್ಷ ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದೆ. ಹಲವೆಡೆ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ. 'ಮೋದಿ ಫ್ಯಾಕ್ಟರ್' ಒಂದೇ ಮುಖ್ಯವಾಗಿದ್ದರೆ, ಪಕ್ಷ ಇಷ್ಟೆಲ್ಲ ಪ್ರಹಸನ ಮಾಡಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಲೋಕಸಭೆ ಚುನಾವಣೆಗೆ ಆರು ತಿಂಗಳ ಮುಂಚೆಯೇ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ತೊಡಗಬೇಕಾದ ಅಗತ್ಯವೂ ಇರುತ್ತಿರಲಿಲ್ಲ. ಕೊನೆ ಕ್ಷಣದಲ್ಲಿ ಮನಸ್ಸಿಗೆ ಬಂದವರಿಗೆ ಟಿಕೆಟ್ ನೀಡಬಹುದಿತ್ತು. ಅದೂ ಆಗುತ್ತಿಲ್ಲ. ಟಿಕೆಟ್ ನೀಡಿದವರೆಲ್ಲ ಯೋಗ್ಯರು ಎಂದು ಭಾವಿಸಬೇಕಿಲ್ಲ. ಇಲ್ಲಿ 'ಯೋಗ್ಯರು' ಎಂಬ ಪ್ರಶ್ನೆಯೇ ಚರ್ಚಾಸ್ಪದ. ಅಷ್ಟಕ್ಕೂ ಯೋಗ್ಯರು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇ.

ಕಾರಣ ಆರಿಸಿ ಬಂದವರೆಲ್ಲ ಯೋಗ್ಯರಾಗಿದ್ದರೆ, ಒಂದಲ್ಲ ಎರಡು ಸಲ ಉತ್ತರಪ್ರದೇಶದ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದ 'ಡಕಾಯಿತರ ರಾಣಿ' ಫೂಲನ್ ದೇವಿಯೂ ಯೋಗ್ಯಳೆಂದೇ ಅನಿಸಿಕೊಳ್ಳುತ್ತಿದ್ದಳು. ಅಲ್ಲೊಂದೇ ಅಲ್ಲ, ದೇಶದ ಹಲವು ಲೋಕಸಭಾ ಕ್ಷೇತ್ರಗಳಿಂದ ಕೊಲೆಗಡುಕರು, ದರೋಡೆಕೋರರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಮೋಸಗಾರರು, ಭಯೋತ್ಪಾದಕರು, ಡೆಡ್ಲಿ ಕ್ರಿಮಿನಲ್ಲುಗಳು ಒಂದಕ್ಕಿಂತ ಹೆಚ್ಚು ಸಲ ಆರಿಸಿ ಬಂದಿದ್ದಾರೆ, ಬರುತ್ತಿದ್ದಾರೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಆರಿಸುವ ಮತ್ತು ಮತದಾರರು ಗೆಲ್ಲಿಸುವ ಅಭ್ಯರ್ಥಿಗಳು ಯೋಗ್ಯರೇ ಆಗಿರುತ್ತಾರೆ ಎಂದರ್ಥವಲ್ಲ. ಹೀಗಾಗಿ ನಮ್ಮನ್ನು ಆಳುವವರು ಅರ್ಹರು, ಯೋಗ್ಯರೇ ಆಗಿರುತ್ತಾರೆ ಎಂದು ಭಾವಿಸುವುದು ಶುದ್ಧ ತಪ್ಪು. ಎಲ್ಲಿ ತನಕ ರಾಜಕೀಯ ಪಕ್ಷಗಳು, ನಾಯಕರು ಶುದ್ಧವಾಗುವ ತನಕ, ಈ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ ಇಲ್ಲ. ಗಂಗೆಯ ಉಗಮ ಸ್ಥಾನವಾದ ಗಂಗೋತ್ರಿಯಲ್ಲಿ ನೀರು ಗಲೀಜಾದರೆ, ಅದು ಕೊನೆಯಲ್ಲಿ ಸಮುದ್ರ ಸೇರುವ ತನಕವೂ ಮಲಿನವಾಗಿಯೇ ಇರುತ್ತದೆ.

ಬೇಕಾದರೆ ನೋಡಿ, ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಅಥವಾ ಎಲ್ಲ ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತವೆ. ಹಲವು ಸುತ್ತಿನ ಆಯ್ಕೆ ಪ್ರಕ್ರಿಯೆಗಳನ್ನು ಏರ್ಪಡಿಸುತ್ತವೆ. ನಂತರ ಸಂದರ್ಶನ. ಈ ಎಲ್ಲ ಹಂತಗಳಲ್ಲಿ ತೇರ್ಗಡೆಯಾದವರನ್ನು ಕಂಪನಿಯ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡುತ್ತವೆ. ಈ ಎಲ್ಲ ಆಯ್ಕೆಗಳಲ್ಲಿ ಮೆರಿಟ್, ಶ್ರೇಷ್ಠತೆ, ಅರ್ಹತೆ, ಯೋಗ್ಯತೆಯೊಂದೇ ಮಾನದಂಡವಾಗಿರುತ್ತವೆ. ಅದರಲ್ಲೂ ದೊಡ್ಡ ದೊಡ್ಡ ಕಂಪನಿಗಳು ಎಲ್ಲರಿಗಿಂತ ಮುಂಚೆಯೇ ಖುದ್ದು ಕ್ಯಾಂಪಸ್ಸಿಗೆ ಹೋಗಿ ಯೋಗ್ಯರಾದವರನ್ನು ಹಿಡಿದು ತಮ್ಮ ಸಂಸ್ಥೆಗೆ ಸೇರಿಸಿಕೊಂಡು ಬಿಡುತ್ತವೆ. ಖಾಸಗಿ ಕಂಪನಿಗಳು ಸೆಕ್ಯೂರಿಟಿ, ವಾಚಮನ್, ಅಟೆಂಡರ್ ಹುದ್ದೆಗೆ ನೇಮಕ ಮಾಡಿಕೊಳ್ಳುವಾಗಲೂ ಅರ್ಹತೆ ಎಂಬ ಮಾಪಕವನ್ನು ಬಳಸುತ್ತವೆ.

ಅಂದರೆ ತಮ್ಮ ಸಂಸ್ಥೆಯಲ್ಲಿ ಇರುವವರೆಲ್ಲ ಸಮರ್ಥರು, ಯೋಗ್ಯರೇ ಇರಲಿ ಎಂದು ಅವು ಬಯಸುತ್ತವೆ. ದೇಶದ ಎಲ್ಲ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ, ಮೊದಲ ಹತ್ತು ಸ್ಥಾನ ಪಡೆದವರನ್ನೇ ತಮ್ಮ ಸಂಸ್ಥೆಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ರಿಲಯನ್ಸ್ ಮಾಲೀಕ ಧೀರೂಭಾಯಿ ಅಂಬಾನಿ ತಾಕೀತು ಮಾಡಿದ್ದರು. ಬುದ್ಧಿವಂತರಿಲ್ಲದೇ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ಜಗತ್ತಿನ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಅನುಸರಿಸುತ್ತಿರುವುದು ಇದೇ ನಿಯಮವನ್ನು. ಇನ್ನು ಕೇಂದ್ರದ ಲೋಕಸೇವಾ ಆಯೋಗ ನಡೆಸುವ ಆಯ್ಕೆಯಲ್ಲೂ (ಮೀಸಲಾತಿ ಬಿಟ್ಟರೆ) ಮೆರಿಟ್ ಒಂದೇ ಮಾನದಂಡ. ಅಂದರೆ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ಮುಂತಾದ ಅಧಿಕಾರಿಗಳೆಲ್ಲ ಈ ದೇಶದ ಮೇಧಾವಿಗಳು. ಹತ್ತಾರು ಲಕ್ಷ ಜನರ ಪೈಕಿ ಕೆಲವೇ ಕೆಲವು ನೂರು ಮಂದಿಯನ್ನು ಆರಿಸುವುದು ಸಣ್ಣ ಕೆಲಸವಲ್ಲ. ಅಂದರೆ ಅಯೋಗ್ಯರು ಸಿಸ್ಟಮ್ ಒಳಗೆ ಬರಲು ಸಾಧ್ಯವೇ ಇಲ್ಲ.

ಆದರೆ ಇಡೀ ದೇಶವನ್ನು ನಿಯಂತ್ರಿಸುವ, ರಾಜಕೀಯ ವ್ಯವಸ್ಥೆ ಮಾತ್ರ ಗಬ್ಬೆದ್ದು ಹೋಗುವಷ್ಟು ಹದಗೆಟ್ಟಿದೆ. ಇದಕ್ಕೆ ಕಾರಣ ಶ್ರೇಷ್ಠತೆ, ಅರ್ಹತೆ ಮತ್ತು ಯೋಗ್ಯತೆಯನ್ನು ಗಾಳಿಗೆ ತೋರಿರುವುದು. ಅವುಗಳ ಬಗ್ಗೆ ಸ್ವಲ್ಪವೂ ಗೌರವ ಇಲ್ಲದಿರುವುದು. ಯಾವತ್ತೂ ಅಯೋಗ್ಯರು ಯೋಗ್ಯರನ್ನು ಆರಿಸಲು ಸಾಧ್ಯವೇ ಇಲ್ಲ. ಅವರು ಯೋಗ್ಯರನ್ನು ಮೆಟ್ಟಲು, ತುಳಿಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಅವರಿಗೆ ಅಸಲಿಗೆ ಯೋಗ್ಯರನ್ನು ಕಂಡರೇ ಆಗುವುದಿಲ್ಲ. ಅದರಲ್ಲೂ ಅಯೋಗ್ಯರಾದವರಿಗೆ ಅಧಿಕಾರ ಸಿಕ್ಕರೆ, ತಮ್ಮ ಸುತ್ತ ದಡ್ಡರು, ಅವಿವೇಕಿಗಳು, ಅಯೋಗ್ಯರನ್ನೇ ಇಟ್ಟುಕೊಂಡಿರುತ್ತಾರೆ, ಯಾವತ್ತೂ ಅಯೋಗ್ಯರು ತಮ್ಮ ಸಂತಾನವನ್ನೇ ಬೆಳೆಸುತ್ತಾ ಹೋಗುತ್ತಾರೆ. ಇಡೀ ವ್ಯವಸ್ಥೆಯಲ್ಲಿ ಯೋಗ್ಯರು ಬರದಂತೆ ತಡೆಗೋಡೆ ಹಾಕಿ, ಬೇಲಿ ಕಟ್ಟಿಕೊಳ್ಳುತ್ತಾರೆ. ಅವರು ಬುದ್ಧಿವಂತರನ್ನು ದ್ವೇಷಿಸುತ್ತಾರೆ. ಯಾವ ಕಾರಣಕ್ಕೂ ಶಾಣ್ಯಾ ವ್ಯಕ್ತಿ ಬೆಳೆಯದಂತೆ ನಿಗಾವಹಿಸುತ್ತಾರೆ. ಯಾರಾದರೂ ಸ್ವಲ್ಪ ಬೆಳೆದರೆ, ತಮಗಿಂತ ಬುದ್ಧಿವಂತ ಎಂಬುದು ಗೊತ್ತಾದರೆ, ಅವರನ್ನು ಮುಲಾಜಿಲ್ಲದೇ ಕತ್ತರಿಸಿ ಹಾಕುತ್ತಾರೆ. ಹೀಗಾಗಿ ರಾಜಕಾರಣದಲ್ಲಿ ಅಲ್ಪ-ಸ್ವಲ್ಪ ಬುದ್ಧಿವಂತರೂ 'ಮಡಗಿದಂತೆ ಇರು'ವುದನ್ನು ರೂಢಿಸಿಕೊಂಡು ಬಿಡುತ್ತಾರೆ.

ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡುವುದನ್ನು ಗಮನಿಸಬಹುದು. ಟಿಕೆಟ್ ಕೊಡುವ ಸ್ಥಾನದಲ್ಲಿ ಕುಳಿತವರು, ತಮಗಿಂತ ಬುದ್ಧಿವಂತರನ್ನು ಅಪ್ಪಿತಪ್ಪಿಯೂ ಆಯ್ಕೆ ಮಾಡುವುದಿಲ್ಲ. ಯಾವ ಕಾರಣಕ್ಕೂ ತಾವು ಟಿಕೆಟ್ ನೀಡುವ ವ್ಯಕ್ತಿ ತಮಗೆ potential threat ಆಗಬಾರದು, ಎಂದೂ ತಮ್ಮನ್ನು overtake ಮಾಡಬಾರದು, ಬುದ್ಧಿಮಟ್ಟದಲ್ಲಿ ತಮಗಿಂತ ಕಮ್ಮಿಯೇ ಆಗಿರಬೇಕು... ಈ ಎಲ್ಲ ಸಂಗತಿಗಳನ್ನು ಪಕ್ಕಾ ಮಾಡಿಕೊಂಡು ಟಿಕೆಟ್ ನೀಡುತ್ತಾರೆ. ಇಂಥವರಿಗೆ ಟಿಕೆಟ್ ನೀಡಬಹುದು ಎಂದು ಶಿಫಾರಸು ಮಾಡುವವರು ಸಹ ತಮಗಿಂತ ಬುದ್ಧಿವಂತರಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರುತ್ತಾರೆ. ನಾವು ಟಿಕೆಟ್ ಕೊಟ್ಟ ವ್ಯಕ್ತಿ ನಾಳೆ ಆರಿಸಿ ಬಂದು ತಮ್ಮ ತಲೆ ಮೇಲೆ ಕುಳಿತುಕೊಳ್ಳಲಾರ, ತಮಗಿಂತ ಮುಂದೆ ಹೋಗಲಾರ ಎಂಬುದನ್ನು ಮನವರಿಕೆ ಮಾಡಿಕೊಂಡೇ ಮುಂದುವರಿಯುತ್ತಾರೆ. ಮನಸ್ಸಿನೊಳಗೆ ಸಣ್ಣ ಸಂದೇಹ ಸುಳಿದರೂ ಅಂಥವರಿಗೆ ಟಿಕೆಟ್ ತಪ್ಪಿಸದೇ ಬಿಡುವುದಿಲ್ಲ. ಬುದ್ಧಿವಂತರಾದವರು ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿರಲಿ, ರಾಜಕಾರಣಕ್ಕೆ ಬೇಡವೇ ಬೇಡ ಎಂದು ಎಲ್ಲ ಪಕ್ಷಗಳ ನಾಯಕರೂ ಬಯಸುತ್ತಾರೆ. ಅಷ್ಟಕ್ಕೂ ರಾಜಕೀಯ ನಾಯಕರಿಗೆ ಬುದ್ಧಿವಂತರ ನೆರಳು ಬಿದ್ದರೆ ಆಗಿಬರುವುದಿಲ್ಲ.

ಹೀಗಾಗಿ ಹಾರ್ವರ್ಡ್, ಸ್ಟ್ಯಾನ್ ಫೋರ್ಡ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಐಐಎಂ, ಐಐಟಿಗಳಲ್ಲಿ ಓದಿದ brilliant minds ರಾಜಕೀಯಕ್ಕೆ ಬರುವುದಿಲ್ಲ. ಯಾಕೆಂದರೆ ಅವರನ್ನು ರಾಜಕೀಯಕ್ಕೆ ಸೇರಿಸಿಕೊಳ್ಳುವುದಿಲ್ಲ, ಅಷ್ಟೇ. ನಾಯಕರಿಗೆ ಬುದ್ಧಿವಂತರ ನೆರಳು, ಬೆವರು ಅಂದ್ರೆ ಅಸಹ್ಯ. ಬುದ್ಧಿವಂತರ ಮಾತುಗಳು ನಾಯಕರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಕಷ್ಟವೇಕೆ ಎಂದು ಅವರನ್ನು ಸದಾ ದೂರವೇ ಇಟ್ಟುಬಿಡುತ್ತಾರೆ. ಹೀಗಾಗಿ ರಾಜಕಾರಣಕ್ಕೆ ಸದಾ ದಡ್ಡರು, ಅಯೋಗ್ಯರು, ಕಳಂಕಿತರು, ಅಪಾತ್ರರು ಮಾತ್ರ ಸಲ್ಲುತ್ತಾರೆ. ಇಂಥವರು ಯಾವತ್ತೂ ನಾಯಕರುಗಳಿಗೆ ಅಡಿಯಾಳಾಗಿರುತ್ತಾರೆ. ನಾಯಕರು ಹೇಳುವ ಎಲ್ಲ ಹಲ್ಕಾ ಕೆಲಸಗಳನ್ನು ಮಾಡಲು ತುದಿಗಾಲ ಮೇಲೆ ನಿಂತಿರುತ್ತಾರೆ. ಇಂಥವರು ಮಾತ್ರ ತಮಗೆ ವಿಧೇಯರಾಗಿ, ನಿಷ್ಠರಾಗಿ ಇರುವವರು ಎಂದು ನಾಯಕರೂ ಭಾವಿಸಿರುತ್ತಾರೆ. ಕೊಳಚೆಯಲ್ಲಿ ಕೊಳಕು ಮಾತ್ರ ಬೆಳೆಯಬಲ್ಲುದು. ಹೀಗಾಗಿ ಇಂಥ ಕೊಳಕು ವ್ಯವಸ್ಥೆ ಹೆಚ್ಚು ಹೆಚ್ಚು ಕೊಳಕರನ್ನು ಬೆಳೆಸುತ್ತಲೇ ಹೋಗುತ್ತದೆ. ಈ ಮಧ್ಯೆ ಯಾವನಾದರೂ ಒಬ್ಬ ಯೋಗ್ಯ ತನ್ನ ಸಾಧನೆ ಮೆರೆದು, ಸ್ವಲ್ಪ ತಲೆ ಎತ್ತಿದರೆ ಸಾಕು, ಅವನಿಗೆ ಟಿಕೆಟ್ ತಪ್ಪಿಸಿ ಕತ್ತರಿಸಿ ಬಿಡುತ್ತಾರೆ.

ಅದಕ್ಷತೆ (incompetence) ಎಂಬುದು ಎಲ್ಲೆಡೆ ಶಾಪವಾದರೆ, ರಾಜಕೀಯದಲ್ಲಿ ಅದು ವರದಾನ. ಕೆಲವರು ಅಯೋಗ್ಯರು, ಅಧ್ಯಕ್ಷರು ಎಂಬ ಕಾರಣಕ್ಕೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ, ಮಂತ್ರಿ ಸ್ಥಾನ ಸೇರಿದಂತೆ ಇನ್ನಿತರ ಹುದ್ದೆಗಳನ್ನು ಹೊಡೆದುಕೊಳ್ಳುತ್ತಾರೆ. ಅರ್ಹರು ಬರದಂತೆ ನೋಡಿಕೊಳ್ಳಬೇಕೆಂದರೆ, ಅಯೋಗ್ಯರನ್ನು ಅಂಥ ಸ್ಥಾನಗಳಲ್ಲಿ ಕುಳ್ಳಿರಿಸಬೇಕು. ಈ ಲೆಕ್ಕಾಚಾರ ನಾಯಕರ ತಲೆಯಲ್ಲಿ ಸದಾ ಸುಳಿಯುತ್ತಲೇ ಇರುತ್ತದೆ. ನಾಯಕನನ್ನು ಒಬ್ಬ mediocre ಸುರಕ್ಷಿತವಾಗಿ ಇಡುವಷ್ಟು ಒಬ್ಬ ಬುದ್ಧಿವಂತ ಇಡಲಾರ. ಕಾರಣ ಆತ (ಅರ್ಹನಾದವನು) ಅಸಲಿಗೆ ಅಂಥವರನ್ನೆಲ್ಲ ಸಹಿಸಿಕೊಳ್ಳುವುದಿಲ್ಲ.

ಹೀಗಾಗಿ ಮರ್ಯಾದಸ್ಥರು, ಬುದ್ಧಿವಂತರು ಇಂಥ ವಾತಾವರಣ ತನಗೆ ತಕ್ಕುದಾದುದಲ್ಲ ಎಂದು ಮೊದಲೇ ನಿರ್ಧರಿಸಿ ದೂರ ಉಳಿದು ಬಿಡುತ್ತಾರೆ. ತಾನೇಕೆ ಪ್ರಯತ್ನಿಸಬಾರದು ಎಂದು ಅಪ್ಪಿತಪ್ಪಿ ಬಂದವರನ್ನು ಹೇಗೆ ಮಟ್ಟ ಹಾಕಬೇಕು ಎಂಬ ಕಲೆ ಇಲ್ಲಿದ್ದವರಿಗೆ ಪಾಂಗಿತವಾಗಿರುತ್ತದೆ. ಹೀಗಾಗಿ ಯೋಗ್ಯನಿಗಿಂತ ಅಯೋಗ್ಯನೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾನೆ, ಆರಿಸಿ ಬರುತ್ತಾನೆ. ಮುಂದೆ ಮಹತ್ವದ ಹುದ್ದೆಗೇರುತ್ತಾನೆ. ಇನ್ನು ನಾಯಕನಾದವನೂ ಬುದ್ಧಿವಂತನೇ ಎನ್ನಿ, ಆತ ತನ್ನ ಸುತ್ತ ಬುದ್ಧಿವಂತರನ್ನೇ ಇಟ್ಟುಕೊಳ್ಳಬಹುದಿತ್ತಲ್ಲ.. ಆದರೆ ಆತನಿಗೂ ತನ್ನ ಸ್ಥಾನದ ಅಭದ್ರತೆ, ಬೇರೆಯವರ ಮೇಲೆ ಗುಮಾನಿ. ಹೀಗಾಗಿ ಆತನೂ ಬುದ್ಧಿವಂತರ ಬದಲಿಗೆ ಅಯೋಗ್ಯರನ್ನೇ ಸುತ್ತುಗಟ್ಟಿಕೊಂಡಿರತ್ತಾನೆ.

ಜಯಲಲಿತಾ ಜೈಲಿಗೆ ಹೋಗುವ ಸಂದರ್ಭದಲ್ಲಿ, ತನ್ನ ಸಂಪುಟದಲ್ಲಿದ್ದ ಹಿರಿಯ ಮತ್ತು ಸಮರ್ಥ ಸಹೋದ್ಯೋಗಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಬದಲು, ಹುಟ್ಟಾ ಅಯೋಗ್ಯನನ್ನೇ ಕುಳ್ಳಿರಿಸಿದಳು. ಲಾಲೂ ಪ್ರಸಾದ ಯಾದವಗೆ ಬೇರೆಯವರ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಓದು-ಬರಹ ಗೊತ್ತಿಲ್ಲದಿದ್ದರೇನಂತೆ, ತನ್ನ ಹೆಂಡತಿಯನ್ನೇ ಮುಖ್ಯಮಂತ್ರಿಯಾಗಿ ಮಾಡಿದ. ತಾನು ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂಬುದು ಮನವರಿಕೆ ಆದ ಬಳಿಕ, ಸೋನಿಯಾ ಗಾಂಧಿ ಮುಂದೆ ಉತ್ತಮ ಆಯ್ಕೆಗಳಿದ್ದವು. ಅವರು ಆಡಳಿತದಲ್ಲಿ ಅನುಭವಿಯಾದ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಹುದ್ದೆಯಲ್ಲಿ ಕುಳ್ಳಿರಿಸಬಹುದಾಗಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡಿದ್ದು ಅತ್ಯಂತ ದುರ್ಬಲ, ಪೇತಲ ಮತ್ತು ಆ ಸ್ಥಾನಕ್ಕೆ ಯೋಗ್ಯರಲ್ಲದ ಡಾ.ಮನಮೋಹನ್ ಸಿಂಗ್ ಅವರನ್ನು. ತಾವು ಹಾಕಿದ ಗೆರೆಯನ್ನು ದಾಟದಷ್ಟು ಅವರು (ಡಾ.ಸಿಂಗ್ )ಧಮ್ ಚೂಕ್ ಎಂಬುದನ್ನು ಅರಿತೇ ಆ ಹುದ್ದೆಯಲ್ಲಿ ಕುಳ್ಳಿರಿಸಿದರು. ಹೀಗಾಗಿ ಅದಕ್ಷರು, ಅಸಮರ್ಥರು, ದುರ್ಬಲರು, ನಾಲಾಯಕುಗಳು ಬೇರೆಲ್ಲೂ ಸಲ್ಲಲಿಕ್ಕಿಲ್ಲ, ರಾಜಕೀಯದಲ್ಲಿ ಅವರಿಗೆ ಒಂದು ಸ್ಥಾನವಂತೂ ಗ್ಯಾರಂಟಿ, ಭದ್ರ. ಇವೆಲ್ಲ ರಾಜಕೀಯದಲ್ಲಿ ಪರಮ ಸದ್ಗುಣ (virtues) ಗಳೇ.

ಕೆಲವೇ ಕೆಲವು ಬುದ್ಧಿವಂತರು ಹಾಗೂ ಚಾಲಾಕಿಗಳು, ಅಯೋಗ್ಯರನ್ನು ಇಟ್ಟುಕೊಂಡು, ಅಪಾತ್ರರನ್ನು ಕಟ್ಟಿಕೊಂಡು ಆಳುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ವ್ಯವಸ್ಥೆಯನ್ನು ಮತ್ತು ಎಲ್ಲಾ ರಾಜಕೀಯ ಪಕ್ಷಗಳನ್ನು ದೂರುತ್ತಲೇ ಇರುತ್ತೇವೆ. ಇದು ಅರ್ಥವಾದರೆ, ಯಾವ ಪಕ್ಷ ಎಂಥವರಿಗೆಲ್ಲ ಟಿಕೆಟ್ ಕೊಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಯೋಗ್ಯರಾದವರಿಗೆ ಟಿಕೆಟ್ ಏಕೆ ಸಿಗುವುದಿಲ್ಲ ಎಂಬುದೂ ಆಗ ಗೊತ್ತಾಗುತ್ತದೆ. ಹೀಗಾಗಿ ಟಿಕೆಟ್ ಗಿಟ್ಟಿಸುವಾಗ ಬುದ್ಧಿವಂತರಾದವರು ಹತ್ತಾರು ಪುಟಗಳ ತಮ್ಮ ಬಯೋಡಾಟಾ ಮತ್ತು ಪ್ರವರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಅದೇ ತಮ್ಮ ನೆಗೆಟಿವ್ ಪಾಯಿಂಟ್ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಸಕಲ ವಿಧಗಳಲ್ಲೂ ತಾವೇ ಯೋಗ್ಯರು, ಅರ್ಹರು ಎಂದು ಪ್ರತಿಪಾದಿಸುತ್ತಾ ಬಡಬಡಿಸುತ್ತಿರುತ್ತಾರೆ. ಆದರೆ ಪಕ್ಷ ಯಾವನೋ ಅಯೋಗ್ಯ ದಡ್ದಮುಂಡೇದಕ್ಕೆ ಟಿಕೆಟ್ ಘೋಷಿಸುತ್ತದೆ. ಟಿಕೆಟ್ ಗಿಟ್ಟಿಸಿದವನ ಬಳಿ ಹೇಳಿಕೊಳ್ಳುವಂಥ ಬಯೋಡಾಟಾ ಕೂಡ ಇರುವುದಿಲ್ಲ. ಆದರೂ ಆತನೇ ಸದರಿ ರಾಜಕೀಯಕ್ಕೆ ಸಲ್ಲುತ್ತಾನೆ ಮತ್ತು ನಂತರ ಆರಿಸಿಯೂ ಬರುತ್ತಾನೆ.

ರಾಜಕಾರಣವೆಂದರೆ ಎಲ್ಲರನ್ನೂ ಒಳಗೊಂಡ ಮೂತ್ರಾಲಯವಿದ್ದಂತೆ. ಅಲ್ಲಿ ಪವಿತ್ರವನ್ನು ಹುಡುಕಲು ಹೋಗಬಾರದು. ಕಾರಣ ಮೂತ್ರಾಲಯಕ್ಕೆ ಬರುವವರು ಸುರಿಯಲು ಪವಿತ್ರ ಗಂಗಾಜಲವನ್ನು ಹಿಡಿದು ಅಥವಾ ಅದನ್ನು ಕುಡಿದು ಬರುವುದಿಲ್ಲ. ದುರ್ದೈವವೆಂದರೆ, ಪಾಪ.. ಮತದಾರರಿಗೆ ಇದು ಅರ್ಥವಾಗುವ ತನಕ ಚುನಾವಣೆಯೇ ಮುಗಿದಿರುತ್ತದೆ!

16/03/2024

ಈ ವಾರದ Ask The Editor ಅಂಕಣದಲ್ಲಿ ಓದುಗರು ಕೇಳಿದ ಎರಡು ಪ್ರಶ್ನೆಗಳಿಗೆ ನನ್ನ ಉತ್ತರ :

* ನಿಂಗರಾಜು ಆರ್., (ಇಮೇಲ್ ಮೂಲಕ)

ಸಾರ್, ಕೆಲವು ದಿನಗಳ ಹಿಂದಷ್ಟೇ ನನಗೆ ಮದುವೆ ನಿಶ್ಚಿತಾರ್ಥ ಆಗಿದೆ. ಇನ್ನು ಎರಡು-ಮೂರು ತಿಂಗಳಲ್ಲಿ ವಿವಾಹವಾಗುತ್ತೇನೆ. ಮದುವೆಯಾದ ಬಳಿಕ ಯಾವ ರೀತಿ ಇರಬೇಕು ಮತ್ತು ಹೆಂಡತಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಸ್ವಲ್ಪ ತಿಳಿಸಿಕೊಡಿ. ನಿಮಗೆ ಅಷ್ಟೂ ಗೊತ್ತಿಲ್ವಾ ಎಂದು ಅಂದುಕೊಳ್ಳಬೇಡಿ.

- ನಿಂಗರಾಜು ಅವರೇ, ವಿವಾಹ ನಿಶ್ಚಿತಾರ್ಥವಾಗಿ ಮದುವೆಯಾಗುವ ಮಧ್ಯದ ಅವಧಿಯಿದೆಯಲ್ಲ, ಅದನ್ನು 'ಗೋಲ್ಡನ್ ಡೇಸ್' ಅಂತಾರೆ. ಆ ದಿನಗಳು ಬರಲಾರವು. ಈ ಅವಧಿಯಲ್ಲಿ ನೀವು ಕೈ ಹಿಡಿಯಲಿರುವ ಹುಡುಗಿ ಜತೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ಇದಕ್ಕೆ ಯಾರಉಪದೇಶ ಬೇಕಿಲ್ಲ. ಈ ಗೋಲ್ಡನ್ ಡೇಸ್ ನ್ನು ಡೈಮಂಡ್ ಅಥವಾ ಪ್ಲಾಟಿನಮ್ ಡೇಸ್ ಆಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂದು ಎಲ್ಲರೂ ಯೋಚಿಸುತ್ತಾರೆ ಮತ್ತು ಅನೇಕರು ಯಶಸ್ವಿಯೂ ಆಗುತ್ತಾರೆ. ಅವಳ ಜತೆ ಕಾರಿನಲ್ಲಿ ಮತ್ತು ಬೈಕಿನಲ್ಲಿ ಸುತ್ತಾಡಿ. ಆದರೆ ರಾತ್ರಿಯಾಗುತ್ತಿದ್ದಂತೆ ಮನೆಗೆ ವಾಪಸ್ ಬರಲು ಮರೆಯಬೇಡಿ. ಸಾಧ್ಯವಾದರೆ ಅವಳಿಗೆ ಪ್ರೇಮಪತ್ರ ಬರೆಯಿರಿ. ನೀವು ಅದೆಂಥ ಅದ್ಭುತ ಬರಹಗಾರ, ಕವಿ ಎಂಬುದು ನಿಮಗೆ ಗೊತ್ತಾಗುವುದು ಈ ಅವಧಿಯಲ್ಲೇ. ಈ ಅವಕಾಶ ನಿಮಗೆ ಮತ್ತೆಂದೂ ಜೀವನದಲ್ಲಿ ಬರುವುದಿಲ್ಲ.

ಇನ್ನು ಮದುವೆಯಾದ ಬಳಿಕ ಯಾವ ರೀತಿ ಇರಬೇಕು ಎಂದು ಕೇಳಿದ್ದೀರಿ. ಮೊದಲ ಮೂರು-ನಾಲ್ಕು ತಿಂಗಳು ಹೇಗೆ ಇದ್ದರೂ ಆದೀತು. ಅವಳೂ ಏನೂ ಅಂದುಕೊಳ್ಳುವುದಿಲ್ಲ. ಆ ಸಮಯ ಹೇಗೆ ಕಳೆದು ಹೋಗುತ್ತದೆ ಎಂಬುದು ನಿಮ್ಮಬ್ಬರಿಗೆ ಗೊತ್ತೂ ಆಗುವುದಿಲ್ಲ.

ಹೆಂಡತಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಸ್ವಲ್ಪ ತಿಳಿಸಿಕೊಡಿ ಎಂದು ಕೇಳಿದ್ದೀರಿ. ಸಮಸ್ಯೆ ಆರಂಭವಾಗುವುದು ಇಲ್ಲಿಯೇ. ಅವಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಯಕ್ಷ ಪ್ರಶ್ನೆಯೇ. 'ಎಲ್ಲ ಹೆಂಗಸರೂ ಬೇರೆ ಬೇರೆ, ಆದರೆ ಎಲ್ಲ ಹೆಂಡತಿಯರೂ ಒಂದೇ' ಎಂಬ ಮಾತಿದೆ. ಹೀಗಾಗಿ ಹೆಂಡತಿ ಹೇಗೆ ವ್ಯವಹರಿಸುತ್ತಾಳೆ ಎಂದು ಹೇಳುವುದು ಕಷ್ಟ. ಬೂಮ್ರಾ ಹೇಗೆ ಬೌಲ್ ಮಾಡುತ್ತಾರೆ ಎಂದು ಹೇಗೆ ಹೇಳುವುದು? ಬ್ಯಾಟ್ ಹಿಡಿದು ನಿಂತಾಗ ಯೋಚಿಸಬೇಕಾದುದನ್ನು ಪೆವಿಲಿಯನ್ ನಲ್ಲಿ ಕುಳಿತು ಯೋಚಿಸಲು ಆಗುವುದಿಲ್ಲ.

ಹೆಂಡತಿ ಅಂದ್ರೆ ವೈಡ್ ಬಾಲ್ ಇದ್ದ ಹಾಗೆ. ಮುಂದಿನ ಎಸೆತ ಕೂಡ ವೈಡ್ ಬಾಲ್ ಎಸೆಯಬಹುದು ಎಂದು ನೀವು ಯೋಚಿಸಿದರೆ, ಅದು ನಿಮ್ಮ ತಲೆಯನ್ನು ಸವರಿಕೊಂಡು ಹೋಗುವ ಬೌನ್ಸ್ ಆಗಿರಬಹುದು. ನೀವು ಹುಕ್ ಶಾಟ್ ಗೆ ಯೋಚಿಸಿದರೆ, ಸ್ಪಿನ್ ಆಗಿ ವಿಕೆಟ್ ಎಗರಿಸಿಕೊಂಡು ಹೋಗಬಹುದು. ನಿಮ್ಮ ಪಾಡಿಗೆ ಸುಮ್ಮನೆ ನಿಂತಿದ್ದರೆ, ಹಿಟ್ ವಿಕೆಟ್ ಆಗಬಹುದು ಅಥವಾ ರನ್ ಔಟ್ ಕೂಡ ಆಗಬಹುದು.

ಹೀಗಾಗಿ ಅವಳೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಕೇಳಿದರೆ, ನಿಶ್ಚಿತ ಉತ್ತರ ಕೊಡುವುದು ಕಷ್ಟ. ನೀವು ಹೇಗೆ ವ್ಯವಹರಿಸಿದರೂ, ಬೈಯಿಸಿಕೊಳ್ಳುವುದು ತಪ್ಪಲ್ಲ. ಗಂಡ ಸರಿ ಎಂದು ಯಾವ ಹೆಂಡತಿಯೂ ಹೇಳುವುದಿಲ್ಲ. ನೀವು ಈಗಿಂದಲೇ ಎಷ್ಟೇ ನೆಟ್ ಪ್ರ್ಯಾಕ್ಟೀಸ್ ಮಾಡಿದರೂ, ಟೆಸ್ಟ್ ಮ್ಯಾಚ್ ಶುರುವಾದಾಗಲೇ ನಿಜವಾದ ಆಟ ಆರಂಭವಾದಂತೆ. ಅಲ್ಲಿ ಆಡುವುದಷ್ಟನ್ನೇ ಪರಿಗಣಿಸುತ್ತಾರೆ. ನಾನು ಏನೇ ಹೇಳಿಕೊಟ್ಟರೂ ಅದು ಪ್ರಯೋಜನಕ್ಕೆ ಬರುವುದಿಲ್ಲ.

**
* ವಿನೂತಾ ಶೆಟ್ಟಿ, ಬೆಂಗಳೂರು

ಭಟ್ರೇ, ನಾನು ಮತ್ತು ನನ್ನ ಸಹೋದ್ಯೋಗಿ ಒಂದೇ ಮಹಡಿಯಲ್ಲಿ ಬೇರೆ ಬೇರೆ ಅಪಾರ್ಟಮೆಂಟುಗಳಲ್ಲಿ ಇದ್ದೇವೆ. ಕಳೆದ ಮೂರು ತಿಂಗಳುಗಳಿಂದ ಪ್ರೀತಿಸುತ್ತಿದ್ದೇವೆ. ನಾವಿಬ್ಬರೂ ಒಂದೇ ಅಪಾರ್ಟಮೆಂಟಿನಲ್ಲಿ ಇರೋಣ, ಆರು ತಿಂಗಳು ಇಬ್ಬರ ಮಧ್ಯೆ ಸಾಮರಸ್ಯ ಮೂಡಿದರೆ ಮದುವೆಯಾಗೋಣ, ಇಲ್ಲದಿದ್ದರೆ ಬಿಟ್ಟುಕೊಳ್ಳೋಣ ಎಂದು ಆತ ಹೇಳುತ್ತಿದ್ದಾನೆ. ನನಗೆ ಏನು ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನನ್ನ ನಿರ್ಧಾರ ಏನಿರಬೇಕು?

- ವಿನೂತಾ ಅವರೇ, ಇದೊಂಥರಾ ಆನ್ ಲೈನ್ ವ್ಯಾಪಾರ ಆದಂತಾಯಿತು. ಒಂದು ವಸ್ತುವನ್ನು ಉಪಯೋಗಿಸಿ, satisfaction ಆಗದಿದ್ದರೆ ವಾಪಸ್ ಕೊಡ್ತಾರಲ್ಲ, ಆ ಥರ ಆಯಿತು. ಸ್ನೇಹ-ಸಂಬಂಧ ಅಥವಾ ವಿವಾಹ ಈ ರೀತಿ ಆಗುವುದಿಲ್ಲ.

ನಿಮ್ಮ ಪ್ರಿಯಕರ ಬಹಳ ಚಾಲೂ ಇದ್ದಾನೆ. ಮೊದಲನೆಯದಾಗಿ, ಆತ ನಿಮ್ಮ ಅಪಾರ್ಟಮೆಂಟಿಗೆ ಶಿಫ್ಟ್ ಆಗಿ ಬಾಡಿಗೆ ಉಳಿಸಲು ಯೋಚಿಸುತ್ತಿದ್ದಾನೆ ಅಥವಾ ನಿಮ್ಮನ್ನೇ ತನ್ನ ಅಪಾರ್ಟಮೆಂಟಿಗೆ ಶಿಫ್ಟ್ ಮಾಡಿಸಿಕೊಂಡು, ನಿಮಗೆ ಹಣ ಉಳಿತಾಯ ಮಾಡುತ್ತಿದ್ದೇನೆ ಎಂಬ ಇಂಪ್ರೆಷನ್ ಕೊಡಲು ಬಯಸಿದ್ದಾನೆ. ಜತೆಗೆ ನಿಮ್ಮನ್ನು ಮನೆ ಚಾಕರಿಗೆ ಹಚ್ಚಿ, ಹೊರಗೆ ಊಟಕ್ಕೆ ಹೋಗುವ ಖರ್ಚನ್ನು ಉಳಿಸಲು ಯೋಚಿಸುತ್ತಿದ್ದಾನೆ.

ಆರು ತಿಂಗಳು ಇಬ್ಬರ ಮಧ್ಯೆ ಸಾಮರಸ್ಯ ಮೂಡಿದರೆ ಮದುವೆಯಾಗೋಣ, ಇಲ್ಲದಿದ್ದರೆ ಬಿಟ್ಟುಕೊಳ್ಳೋಣ ಎನ್ನುವುದು ಶುದ್ಧ ವ್ಯಾವಹಾರಿಕ ಸಂಬಂಧ. ಈ ವಿಷಯದಲ್ಲಿ ಹೆಡ್ ಬೀಳಲಿ, ಟೇಲ್ ಬೀಳಲಿ, ಆತನೇ ವಿಜಯಿ. ಆ ರೀತಿಯ ತುರ್ಫು ಬಿಟ್ಟಿದ್ದಾನೆ. ಜತೆಗೆ ನಿಮ್ಮ ಜತೆ ಆರು ತಿಂಗಳು ಜವಾಬ್ದಾರಿಯಿಲ್ಲದ, ಬಿಟ್ಟಿ ಸುಖ ಅನುಭವಿಸಲು ಪೀಠಿಕೆ ಹಾಕಿದ್ದಾನೆ.

ಇಂಥವರ ಜತೆ ವ್ಯವಹರಿಸುವಾಗ ಎಚ್ಚರ ಇರಲಿ. ಯಾವ ಕಾರಣಕ್ಕೂ ಮೈಮೇಲಿನ ಪ್ರಜ್ಞೆ ಕಳೆದುಕೊಳ್ಳಬೇಡಿ. ಇನ್ನು ಇದ್ದಷ್ಟು ದಿನ ಆತನ ಜತೆಗೆ ಚೈನಿ ಮಾಡೋಣ ಎಂಬುದು ನಿಮ್ಮ ಇರಾದೆಯಾಗಿದ್ದರೆ ಮುಂದುವರಿಯಬಹುದು. ಆತ ಒಂದೇ ಅಲ್ಲ, ನೀವೂ ಕಸ್ಟಮರ್ ಫೀಡ್ ಬ್ಯಾಕ್ ತೆಗೆದುಕೊಳ್ಳಬಯಸುವುದು ತಪ್ಪಲ್ಲ.

**

13/03/2024

ವನವನ್ನು ಗೌರವಿಸದೇ, ಅಲ್ಲಿನ ವನ್ಯಜೀವಿಗಳ ಫೋಟೋ ತೆಗೆಯಬಾರದು!
- ವಿಶ್ವೇಶ್ವರ ಭಟ್ I ನೂರೆಂಟು ವಿಶ್ವ I ವಿಶ್ವವಾಣಿ

ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಅಮೆರಿಕದಿಂದ ಆಗಮಿಸಿದ್ದರು. ನಾವಿಬ್ಬರೂ ಕಬಿನಿ ಅಥವಾ ಬಂಡೀಪುರಕ್ಕೆ ಹೋಗುವುದೆಂದು ಮೊದಲೇ ನಿರ್ಧರಿಸಿದ್ದೆವು. ಅವರು ಸ್ವಯಂಘೋಷಿತ ವೈಲ್ಡ್ ಲೈಫ್ ಫೋಟೋಗ್ರಾಫರ್ ಬೇರೆ. ಆದರೆ ನನಗೆ ಏನೋ ತುರ್ತು ಕೆಲಸ ಬಂದಿದ್ದರಿಂದ ಅವರೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ನನಗೆ ಮತ್ತು ನನ್ನ ಸ್ನೇಹಿತರಿಗೆ ಪರಿಚಿತರಾಗಿರುವ ಮತ್ತೊಬ್ಬ ವ್ಯಕ್ತಿಯನ್ನು ಜತೆ ಮಾಡಿ, ಎರಡು ದಿನಗಳಿಗೆ ಬುಕಿಂಗ್ ಮಾಡಿಸಿ, ಅವರನ್ನು ಕಬಿನಿಗೆ ಕಳಿಸಿದೆ. ಅವರೊಂದಿಗೆ ಹೋಗದೇ ಇದ್ದುದಕೆ ನನಗೆ ಅತೀವ ಬೇಸರವಾಯಿತು.

ಮೊದಲ ದಿನ ಅವರು ಕಬಿನಿ ತಲುಪುವ ಹೊತ್ತಿಗೆ ಮಧ್ಯಾಹ್ನ ಊಟದ ಸಮಯ. ಅದಾಗಿ ರೂಮು ಸೇರಿಕೊಂಡು ಒಂದು ತಾಸು ವಿಶ್ರಾಂತಿ ತೆಗೆದುಕೊಂಡ ಬಳಿಕ ಸಫಾರಿಗೆ ಬುಲಾವ್ ಬಂದಿತು. ಅವರಿಗಾಗಿಯೇ ವಿಶೇಷ ಸಫಾರಿ ವಾಹನ ಆಯೋಜಿಸಿದ್ದೆ. ಅವರು ಕಾಡಿನಲ್ಲಿ ಸುಮಾರು ಎರಡು ಗಂಟೆ ಸುತ್ತಾಡಿ ಸಾಯಂಕಾಲ ಆರೂವರೆ ಹೊತ್ತಿಗೆ ಮರಳಿದರು. ಅವರು ಅಲ್ಲಿಂದಲೇ ನನಗೆ ಫೋನ್ ಮಾಡಿ, 'ನಾನು ಅಮೆರಿಕದಿಂದ ಹೊರಟ ಮುಹೂರ್ತವೇ ಸರಿ ಇಲ್ಲ ಅಂತ ಕಾಣುತ್ತೆ. ಇಷ್ಟೆಲ್ಲ ಅಲೆದಾಡಿದರೂ ಒಂದೇ ಒಂದು ಹುಲಿ ಕಣ್ಣಿಗೆ ಬೀಳಲಿಲ್ಲ' ಎಂದು ತಮ್ಮ ಮೊದಲ ದಿನದ ಅನುಭವವನ್ನು ಹೇಳಿ ಬೇಸರ ವ್ಯಕ್ತಪಡಿಸಿದರು. ನಾನು ಅವರಿಗೆ, 'ನೀವು ಬಂದಿದ್ದು ಆ ಹುಲಿಗಳಿಗೆ ಗೊತ್ತಾಗಲಿಲ್ಲ. ನಾಳೆ ಬರುತ್ತವೆ ಬಿಡಿ. ಇಂದು ಆರಾಮವಾಗಿ ವಿಶ್ರಾಂತಿ ಮಾಡಿ' ಎಂದು ತಮಾಷೆ ಮಾಡಿದೆ. ಅವರೂ ನಕ್ಕರು.

ಮರುದಿನ ಬೆಳಗ್ಗೆ ಐದು ಗಂಟೆಗೆ ಅವರು ತಮ್ಮ ಕೊಳವೆಯಾಕಾರದ ಕೆಮರಾ ಹಿಡಿದು ಸಫಾರಿಗೆ ಸಿದ್ಧವಾಗಿ ನಿಂತಿದ್ದರು. ಸಫಾರಿ ಮುಗಿಸಿ ಫೋನ್ ಮಾಡಬಹುದು, ಈಗ ಕಾಡಿನಲ್ಲಿ ಸಫಾರಿಯಲ್ಲಿರಬಹುದು ಎಂದು ನಾನು ಅವರಿಗೆ ಬೆಳಗ್ಗೆ ಫೋನ್ ಮಾಡಲಿಲ್ಲ. ಒಂಬತ್ತೂವರೆ ಹೊತ್ತಿಗೆ ಅವರ ಫೋನ್ ಬಂದಿತು. 'ನಿನ್ನೆ ನಾನು ಹೇಳಲಿಲ್ಲವಾ? ಹಾಗೆ ಆಯಿತು' ಎಂದರು. ನಾನು 'ಏನಾಯಿತು? ನನಗೆ ಅರ್ಥ ಆಗ್ತಾ ಇಲ್ಲ' ಎಂದೆ. ಅದಕ್ಕೆ ಅವರು, 'ನಾನು ಅಮೆರಿಕದಿಂದ ಹೊರಟ ಗಳಿಗೆಯೇ ಸರಿ ಇಲ್ಲ ಅಂತ ಕಾಣುತ್ತೆ. ಇಂದು ಏನಿಲ್ಲವೆಂದರೂ ಮೂರು ತಾಸು ಕಾಡಿನಲ್ಲಿ ಅಲೆದಾಡಿರಬಹುದು. ಸಫಾರಿ ಡ್ರೈವರ್ ಕೂಡ ನಮ್ಮನ್ನು ಎಲ್ಲ ಕಡೆ ಸುತ್ತಾಡಿಸಿದ. ಒಂದೇ ಒಂದು ಹುಲಿ ಕಾಣಲಿಲ್ಲ. ನನಗೆ ಬಹಳ ಬೇಸರ ಆಗ್ತಿದೆ. ನಾನು ಅಷ್ಟು ದೂರದಿಂದ ಬಂದರೂ, ಒಂದೇ ಒಂದು ಹುಲಿ ಕಾಣಲಿಲ್ಲ ಅಂದ್ರೆ ನನ್ನ ಬ್ಯಾಡ್ ಲಕ್ ಅನ್ನದೇ ವಿಧಿಯಿಲ್ಲ' ಎಂದು ವಿಚಿತ್ರ ಬಳಲಿಕೆ-ಹಳಹಳಿಕೆಯಲ್ಲಿ ಕೊರಗಿದರು.

ನಾನು ಏನೂ ಹೇಳಲಿಲ್ಲ. 'ಕಬಿನಿಯಲ್ಲಿರುವ ಆ ಹುಲಿಗಳಿಗೆ ನಿಮ್ಮನ್ನು ನೋಡುವ ನಸೀಬು ಇಲ್ಲ ಅಂತ ಅನಿಸುತ್ತಿದೆ. ಹೇಗಿದ್ದರೂ ಇಂದೂ ಕೂಡ ಮಧ್ಯಾಹ್ನ ಊಟವಾದ ಬಳಿಕ ಸಾಯಂಕಾಲ ಮತ್ತೊಮ್ಮೆ ಸಫಾರಿಗೆ ಕರೆದುಕೊಂಡು ಹೋಗ್ತಾರಲ್ಲ. ಆಗ ಸಿಗಬಹುದು' ಎಂದು ಸಾಂತ್ವನ ಹೇಳಿದೆ. ಈ ಮಧ್ಯೆ ಅವರ ಜತೆಯಲ್ಲಿರುವ ನಮ್ಮಿಬ್ಬರ ಕಾಮನ್ ಫ್ರೆಂಡ್ ನನಗೆ ಫೋನ್ ಮಾಡಿ, 'ಎಂಥ ಮನುಷ್ಯನನ್ನು ಗಂಟು ಹಾಕಿದೆ ಮಾರಾಯ? ಹುಲಿ ಕಂಡಿಲ್ಲ ಎಂದು ಈತ ಒಂದೇ ಸಮನೆ ಹಲುಬುತ್ತಿದ್ದಾನೆ.. ಇವನ ಗೋಳನ್ನು ನೋಡಲು ಆಗುತ್ತಿಲ್ಲ. ಅಷ್ಟಾಗಿಯೂ ಹುಲಿಯನ್ನು ನೋಡಲೇಬೇಕು ಅಂದ್ರೆ ಬರುವಾಗ ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ, ಹುಲಿಯನ್ನು ತೋರಿಸಿಕೊಂಡು ಬರ್ತೇನೆ. ಈವಯ್ಯನಿಗೆ ಹುಲಿಯೇನಾದರೂ ಗೋಚರಿಸಿದರೆ, ಸಿಟ್ಟಿನಲ್ಲಿ ಅದನ್ನು ಸಾಯಿಸಿಬಿಡಬಹುದು. ಆ ಥರ ಆಡ್ತಾ ಇದ್ದಾನೆ' ಎಂದು ಅಲವತ್ತುಕೊಂಡ.

ಆ ದಿನ ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳದೇ ನನ್ನ ಅಮೆರಿಕ ಸ್ನೇಹಿತ ಸಾಯಂಕಾಲದ ಸಫಾರಿಗೆ ಸನ್ನದ್ಧನಾಗಿದ್ದ. ಮಧ್ಯಾಹ್ನ ಮೂರೂವರೆ ಆಗುತ್ತಿದ್ದಂತೆ, ಸಫಾರಿ ವಾಹನ ಬಂತು. ಅದರಲ್ಲಿ ಆತ ಕುಳಿತುಕೊಂಡವನೇ ಡ್ರೈವರ್ ಗೆ, 'ಈಗಲಾದರೂ ಹುಲಿಯನ್ನು ತೋರಿಸ್ತೀರೋ, ಇಲ್ಲವೋ?' ಎಂದು ಕೇಳಿದ. ಅದಕ್ಕೆ ಡ್ರೈವರ್, 'ಹುಲಿಯನ್ನು ನಾವು ಅಡಗಿಸಿ ಇಟ್ಟುಕೊಂಡಿರುವುದಿಲ್ಲ. ಒಮ್ಮೊಮ್ಮೆ ಅವು ಸೈಟ್ ಆಗುವುದಿಲ್ಲ. ಈ ಕಾಡಿನಲ್ಲಿ ನೂರಾರು ಹುಲಿಗಳಿವೆ. ಸಾಮಾನ್ಯವಾಗಿ ಅವು ದಿನವೂ ಕಾಣುತ್ತವೆ. ಒಮ್ಮೊಮ್ಮೆ ಮೂರ್ನಾಲ್ಕು ದಿನಗಳಾದರೂ ಕಾಣದೇ ಹೋಗಬಹುದು. ಈ ವಿಶಾಲ ಕಾಡಿನಲ್ಲಿ ಅವು ಸ್ವತಂತ್ರ. ಎಲ್ಲಿ ಬೇಕಾದರೂ ಅಲೆದಾಡಬಹುದು. ಒಮ್ಮೊಮ್ಮೆ ಕಾಣುತ್ತವೆ, ಒಮ್ಮೊಮ್ಮೆ ಕಾಣುವುದಿಲ್ಲ. ಕೆಲವು ಸಲ ಐದಾರು ಹುಲಿಗಳು ಎದುರಾಗಬಹುದು. ಆಹಾರ ಹುಡುಕಿಕೊಂಡು ಎಲ್ಲೆಲ್ಲಿಗೋ ಹೋಗುತ್ತವೆ. ಅವು ಎಲ್ಲಿಗೇ ಹೋದರೂ ನೀರು ಕುಡಿಯಲು ಕಾಡಿನಲ್ಲಿರುವ ಕೆರೆಗಳಿಗೆ ಬರುತ್ತವೆ. ನೋಡಿ, ಇಲ್ಲಿ ಅವುಗಳ ಕಾಲಿನ ಹೆಜ್ಜೆ ಗುರುತುಗಳಿವೆ' ಎಂದು ಸಮಾಧಾನದಿಂದ ವಿವರಿಸಿದ. ಆದರೆ ನಮ್ಮ ಸ್ನೇಹಿತರಿಗೆ ಸಮಾಧಾನವಾಗಲಿಲ್ಲ. 'ನಾವು ಅಷ್ಟು ದೂರದಿಂದ ಬಂದಿರುವುದು ಹುಲಿಗಳನ್ನು ನೋಡಲು. ಹುಲಿ ಹೆಜ್ಜೆ ಗುರುತುಗಳನ್ನು ನೋಡಲು ಅಲ್ಲ' ಎಂದು ನಮ್ಮ ಸ್ನೇಹಿತ ತುಸು ಒರಟಾಗಿಯೇ ಹೇಳಿದ. ಅದಕ್ಕೆ ಸಫಾರಿ ಡ್ರೈವರ್ ಏನೂ ಹೇಳಲಿಲ್ಲ.

ಅಂತೂ ಆ ದಿನ ಸಾಯಂಕಾಲವೂ ಹುಲಿ ದರ್ಶನ ಆಗಲಿಲ್ಲ. ನನ್ನ ಸ್ನೇಹಿತರ ಸಹನೆ ಕಟ್ಟೆಯೊಡೆದಿತ್ತು. ಸಾಯಂಕಾಲ ಏಳು ಗಂಟೆಗೆ ಬರುತ್ತಿದ್ದಂತೆ, 'ಇದೆಂಥ ದರಿದ್ರ ವ್ಯವಸ್ಥೆ? ಇವರು ಜನರ ಸುಲಿಗೆ ಮಾಡ್ತಾ ಇದ್ದಾರೆ. ನೂರಾರು ಹುಲಿಗಳಿವೆ ಅಂತಾರೆ, ಆದರೆ ಒಂದು ಒಂದು ಹುಲಿ ಕೂಡ ಕಾಣಲಿಲ್ಲ. ಅನುಮಾನವೇ ಬೇಡ, ಮತ್ತೊಮ್ಮೆ ಬರಲಿ ಎಂಬ ಕಾರಣಕ್ಕೆ ಹುಲಿ ಇರುವ ಕಡೆ ನಮ್ಮನ್ನು ಕರೆದುಕೊಂಡು ಹೋಗಲಿಲ್ಲ. ಇಂಡಿಯಾದಲ್ಲಿ ಈ ರೀತಿ ಮೋಸ ಮಾಡ್ತಾರೆ ಎಂದು ಗೊತ್ತಿರಲಿಲ್ಲ. ಹತ್ತಿಪ್ಪತ್ತು ಸಾವಿರ ರುಪಾಯಿ ಖರ್ಚು ಮಾಡಿ ಜನ ಇಲ್ಲಿಗೆ ಹುಲಿಗಳನ್ನು ನೋಡಲು ಬರ್ತಾರೆ. ಆದರೆ ಇಲ್ಲಿ ಬಂದು ನಿರಾಸೆಯಿಂದ ಮರಳುತ್ತಾರೆ. ಇದು ಇನ್ನೊಂದು ಸಲ ಬರಲಿ ಎಂಬ ಮಾರ್ಕೆಟಿಂಗ್ ಟ್ರಿಕ್ ಇರಬಹುದು ಎನಿಸುತ್ತದೆ' ಎಂದು ಬಡಬಡಿಸಿದರು. ನಾನು ಅವರ ಬಳಿ ಹೆಚ್ಚು ವಾದ ಮಾಡಲಿಲ್ಲ. ಅವರ ಪ್ಯಾಕೇಜ್ ಮುಗಿದಿತ್ತು. ಆದರೂ ಕಬಿನಿ ಜಂಗಲ್ ಲಾಡ್ಜ್ ಮ್ಯಾನೇಜರ್ ಗೆ ಫೋನ್ ಮಾಡಿ, ನಾಳೆ ಬೆಳಗ್ಗೆಯೂ ಪ್ರತ್ಯೇಕ ವಾಹನದಲ್ಲಿ, ನುರಿತ ಡ್ರೈವರ್ ಜತೆ ಮಾಡಿ ನನ್ನ ಸ್ನೇಹಿತರನ್ನು ಸಫಾರಿಗೆ ಕರೆದುಕೊಂಡು ಹೋಗುವಂತೆ ಬಿನ್ನವಿಸಿದೆ. ಆ ದಿನ ಸಾಯಂಕಾಲ ಮ್ಯಾನೇಜರ್, ಎಲ್ಲ ಡ್ರೈವರ್ ಗಳನ್ನು ಕರೆದು, ಹುಲಿ ಎಲ್ಲಾದರೂ ಸೈಟ್ ಆಗಿದೆಯಾ ಎಂದು ವಿಚಾರಿಸಿದರು. ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ಸರಿ ಮೂರನೇ ದಿನ ಬೆಳಗಿನ ಜಾವ ನನ್ನ ಅಮೆರಿಕ ಸ್ನೇಹಿತರು ಕೊನೆ ಪ್ರಯತ್ನವಾಗಿ, ಹುಲಿ ನೋಡಲು ಸಜ್ಜಾದರು. ಆ ದಿನ ಸುಮಾರು ಮೂರೂವರೆ ಗಂಟೆ ಕಾಡಿನಲ್ಲಿ ಅಲೆದಾಡಿ ವಾಪಸ್ ಬಂದರು. ಅಜ್ಜಿಪಿಂಡ... ಉಹುಂ... ಹುಲಿ ಕಾಣಲೇ ಇಲ್ಲ! ಹಾಗಂತ ಅಮೆರಿಕನ್ ಸ್ನೇಹಿತರ ಹಾತೆಗಿದ್ದ ನಮ್ಮಿಬ್ಬರ ಕಾಮನ್ ಫ್ರೆಂಡ್ ಹೇಳಿದ.. ಅವರು ಸ್ವಾಟೆ ಉದ್ದ ಮಾಡಿಕೊಂಡು, ಮೂಡು ಕೆಡಿಸಿಕೊಂಡು ಕುಳಿತಿರುತ್ತಾರೆ ಎಂಬುದು ನನಗೆ ಗೊತ್ತಿತ್ತು. ವಾಪಸ್ ಬೆಂಗಳೂರಿಗೆ ಬರಲಿ, ಮಾತಾಡಿದರಾಯಿತು, ಸಮಾಧಾನ ಹೇಳಿದರಾಯಿತು ಎಂದು ಅಂದುಕೊಂಡೆ. ಹೀಗಾಗಿ ಅವರನ್ನು ಸಂಪರ್ಕಿಸಲು ಹೋಗಲಿಲ್ಲ. ಅವರು ಅದೇ ದಿನ ಅಲ್ಲಿಂದ ಹೊರಟು ಸಾಯಂಕಾಲದ ಹೊತ್ತಿಗೆ ಬೆಂಗಳೂರಿಗೆ ಮರಳಿ ತಮ್ಮ ಮನೆ ಸೇರಿಕೊಂಡಿದ್ದರು.

ನಾನು ಮರುದಿನ ಬನಶಂಕರಿಯಲ್ಲಿರುವ ಅವರ ಮನೆಗೆ ಹೋದೆ. ಸ್ನೇಹಿತರ ಸ್ವಾಟೆ ಸರಿ ಹೋಗಿರಲಿಲ್ಲ. 'ಯಾರ ಮುಖ ನೋಡಿ ಹೊರಟೆನೋ ಗೊತ್ತಿಲ್ಲ. ಬಹಳ ನಿರಾಸೆ ಆಗಿಹೋಯ್ತು. ಮೂರು ದಿನ ವೇಸ್ಟ್ ಆಗಿಹೋಯ್ತು. ಒಂದೇ ಒಂದು ಹುಲಿ ಕಾಣಿಸಲಿಲ್ಲ. ನನಗೆ ಅನಿಸ್ತಾ ಇದೆ, ಇದೊಂದು racket ಇರಬಹುದಾ ಅಂತ. ಜನರನ್ನು ಈ ಥರ ಮೋಸ ಮಾಡ್ತಾರೆ ಅಂತ ಗೊತ್ತಿರಲಿಲ್ಲ' ಎಂದು ಅತೀವ ಬೇಸರದಿಂದ ಹೇಳಿದರು.

ಅಷ್ಟು ಹೊತ್ತು ಸುಮ್ಮನಿದ್ದ ನಾನು, ಇನ್ನು ಮೌನ ಸಲ್ಲ ಎಂದು ತೀರ್ಮಾನಿಸಿದೆ. You missed a golden opportunity ಎಂದೆ. ಅವರು ನನ್ನತ್ತ ದುರುಗುಟ್ಟಿ ನೋಡಿದರು. 'ಅಲ್ಲಾರಿ, ಪ್ರತಿದಿನ ನೂರಾರು ಜನ ಕಬಿನಿಗೆ ಹೋಗುತ್ತಾರೆ. ನಿಮ್ಮ ಹಾಗೆ ಯಾರೂ ಆಪಾದನೆ ಮಾಡಿದ್ದನ್ನು ನಾನು ನೋಡಿಲ್ಲ, ಕೇಳಿಲ್ಲ. ನಾನು ಅನೇಕ ಸಲ ಅಲ್ಲಿಗೆ ಹೋಗಿ ಹುಲಿ ನೋಡದೇ ವಾಪಸ್ ಬಂದಿದ್ದೇನೆ. ಆದರೆ ಒಮ್ಮೆಯೂ ನನಗೆ ಬರಿಗೈಲಿ ಬಂದಿದ್ದೇನೆ ಎಂದು ಅನಿಸಿಲ್ಲ. ಕಾರಣ ನಾನು ಅಲ್ಲಿಗೆ ಹೋಗುವುದು ಹುಲಿಯೊಂದನ್ನೇ ನೋಡಲು ಅಲ್ಲ. ನಾನು ಅಲ್ಲಿಗೆ ಹೋಗುವುದು ಕಾಡನ್ನು ನೋಡಲು. ಕಾಡಿನಲ್ಲಿರುವ ನೂರಾರು ಅಂಶಗಳಲ್ಲಿ ಹುಲಿಯೂ ಒಂದು. ಹುಲಿಯೇ ಸರ್ವಸ್ವ ಅಲ್ಲ. ಒಂದು ಕ್ಷಣ ಅದನ್ನು ಪಕ್ಕಕ್ಕೆ ಇಡಿ. ಕಬಿನಿ ನಮ್ಮ ರಾಜ್ಯದ ಅಪರೂಪದ ಅಭಯಾರಣ್ಯಗಳಲ್ಲೊಂದು. ಅದರಲ್ಲಿ ಅಸಂಖ್ಯ ಸಸ್ಯ ಪ್ರಬೇಧಗಳಿವೆ. ನೂರಾರು ವರ್ಷಗಳ ಮರಗಳಿವೆ, ಗಿಡಮೂಲಿಕೆಗಳಿವೆ. ಜಿಂಕೆ, ಕಾಡೆಮ್ಮೆ, ಸಾಂಬಾರ, ನರಿ, ತೋಳ, ಚಿರತೆ, ಬ್ಲ್ಯಾಕ್ ಪ್ಯಾಂಥರ್, ಆನೆ ಸೇರಿದಂತೆ ಅಸಂಖ್ಯ ವನ್ಯಜೀವಿಗಳಿವೆ. ನೂರಾರು ಪಕ್ಷಿ ಸಂಕುಲಗಳಿವೆ. ಕಣ್ಣಿಗೆ ಕಾಣುವ ಮತ್ತು ಕಾಣದ ಇನ್ನೂ ಅವೆಷ್ಟು ಜೀವಿಗಳಿವೆಯೋ ಗೊತ್ತಿಲ್ಲ.

ಆ ಕಾಡು ಒಂದು ಅದ್ಭುತ ಜಗತ್ತು. ಲಕ್ಷಾಂತರ ಜೀವಿಗಳಿಗೆ ಆಶ್ರಯ ನೀಡಿದ ಪವಿತ್ರ ತಾಣ. ಅಂಥ ಒಂದು ಕಾಡು ಸಾವಿರಾರು ವರ್ಷಗಳ ನೈಸರ್ಗಿಕ ಕ್ರಿಯೆಗಳಿಂದ ಅವತರಿಸಿರುವಂಥದ್ದು. ಆ ಕಾಡಿನ ಮಧ್ಯೆ ನಿಂತು ಮೌನವನ್ನು ಧೇನಿಸುವುದು ಸಹ ಒಂದು ದಿವ್ಯ ಅನುಭೂತಿ. ಹಕ್ಕಿ-ಪ್ರಾಣಿಗಳ ಸಂವಹನವನ್ನು ಆಲಿಸುವುದು ಒಂದು ಅನೂಹ್ಯ ಅನುಭವ. ಸಮುದ್ರಕ್ಕೆ ಹೋಗುವವರು ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ನೀರನ್ನು ಮೊಗೆದು ತರುವಂತೆ, ಕಾಡಿಗೆ ಹೋದವರೂ ತಮ್ಮ ಅನುಭವಕ್ಕೆ ನಿಲುಕುವಷ್ಟನ್ನು ತೆಗೆದುಕೊಂಡು ಬರುತ್ತಾರೆ. ಬರೀ ಜೀರುಂಡೆಗಳ ಸದ್ದನ್ನು ಕೇಳಲು, ಮಳೆಹುಳು, ಮುಂಗೂಸಿಯನ್ನು ನೋಡಲು ಕಾಡಿಗೆ ಹೋಗುವವರಿದ್ದಾರೆ. ಅಲ್ಲಿಂದ ಬರುವಾಗ ಯಾರೂ ಖಾಲಿ ಅನುಭವದಿಂದ ಬರುವುದಿಲ್ಲ. ಕಾಡಿನಲ್ಲಿ ಬಿದ್ದ ಆನೆ ಲದ್ದಿ ನೂರು ವಿಷಯಗಳನ್ನು ಹೇಳುತ್ತದೆ. ಹುಲಿ ಹೆಜ್ಜೆ ಅನೇಕ ಪಾಠಗಳನ್ನು ಕಲಿಸುತ್ತವೆ.

ಕಾಡಿನಲ್ಲಿ ಹುತ್ತವನ್ನು ನೋಡಿದರೆ ಸುತ್ತಮುತ್ತ ನೀರಿನ ಪಸೆ ಇದೆ ಎಂಬುದು ಗೊತ್ತಾಗುತ್ತದೆ, ನೀರಿನ ಪಸೆ ಕಂಡರೆ ಹಸುರು ಹುಲ್ಲುಗಳಿವೆ ಎಂಬುದು ತಿಳಿಯುತ್ತದೆ, ಹುಲ್ಲುಗಳಿರುವೆಡೆ ಜಿಂಕೆಗಳಿವೆ ಎಂದು ಅಂದಾಜು ಮಾಡಬಹುದು, ಜಿಂಕೆಗಳಿದ್ದರೆ ಅಲ್ಲಿ ಹುಲಿಗಳಿವೆ ಎಂದು ತೀರ್ಮಾನಿಸಬಹುದು. ಕಾಡಿನಲ್ಲಿ ನಾವು ನೋಡುವುದೆಲ್ಲ ಹೊಸತು. ಪ್ರತಿ ಕ್ಷಣವೂ ವಿನೂತನ. ಲಕ್ಷಾಂತರ ಜೀವಿಗಳಿದ್ದರೂ ಅಲ್ಲೊಂದು ಸುವ್ಯವಸ್ಥೆ (ಆರ್ಡರ್) ಇರುವುದನ್ನು ಕಾಣಬಹುದು. ಅಲ್ಲಿ ಸರಕಾರ ಇಲ್ಲ. ಆದರೂ ಪ್ರಾಣಿ(ಪ್ರಜಾ)ಪ್ರಭುತ್ವ ಇದೆ. ಗ್ಯಾರಂಟಿ ಸ್ಕೀಮುಗಳು ಇಲ್ಲದಿದ್ದರೂ ಅಲ್ಲಿ ಯಾರೂ ಉಪವಾಸ ಬಿದ್ದು ಸಾಯುವುದಿಲ್ಲ. ಕಾಡಿನಂಥ ಲೋಕ ಮತ್ತೊಂದಿಲ್ಲ. ಇರುವೆಗಳು, ಗೆದ್ದಲುಗಳು, ಕಣಜಗಳು, ಕೆಂಪಿರುವೆಗಳು, ಕಟ್ಟಿರುವೆಗಳು, ಗೊರವಂಟಗಳು ಇರುವಂತೆ ಹುಲಿಗಳೂ ಇವೆ.

ಹುಲಿಯೇ ಅಲ್ಲಿನ ಸರ್ವಸ್ವವಲ್ಲ. ಇವೆಲ್ಲವುಗಳನ್ನೂ ಕೆಮರಾದಲ್ಲಿ ಸೆರೆ ಹಿಡಿಯಬಹುದು. ಹುಲಿ ಫೋಟೋ ಕ್ಲಿಕ್ಕಿಸಿದರೆ ಮಾತ್ರ ವೈಲ್ಡ್ ಲೈಫ್ ಫೋಟೋಗ್ರಾಫರ್ ಎಂದು ಭಾವಿಸಬೇಕಿಲ್ಲ. ಕಾಡಿನಲ್ಲಿರುವ ಯಾವ ಪ್ರಾಣಿ-ಪಕ್ಷಿ-ಮರ-ಗಿಡಗಳ ಫೋಟೋ ತೆಗೆದರೂ ನೀವು ವೈಲ್ಡ್ ಲೈಫ್ ಫೋಟೋಗ್ರಾಫರ್ ಎಂದು ಕರೆಯಿಸಿಕೊಳ್ಳುತ್ತೀರಿ. ಕಾಡು ಮತ್ತು ವನ್ಯಪ್ರಾಣಿಗಳನ್ನು ನಾವು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು. ಕಾಡನ್ನು ಅರಿಯದೇ, ಅಲ್ಲಿನ ಸಂರಚನೆಯನ್ನು ಅರ್ಥ ಮಾಡಿಕೊಳ್ಳದೇ ಹುಲಿ ಫೋಟೋ ತೆಗೆಯಬಾರದು. ಅದರ ಬದಲು ಝೂಗೆ ಹೋಗಿ ಹುಲಿ ಚಿತ್ರ ಸೆರೆ ಹಿಡಿಯಬಹುದಲ್ಲ?

ಹಾಗಂತ ಒಂದು ಸಣ್ಣ ‘ಬೌದ್ಧಿಕ್’ ಕೊಟ್ಟೆ. ಯಾಕೋ ಸ್ವಲ್ಪ harsh ಆಯಿಯಿತೇನೋ ಎಂದು ನನಗೇ ಅನಿಸಿತು. ನನ್ನ ಸ್ನೇಹಿತರು ಮಾತಾಡಲಿಲ್ಲ. ಅದಕ್ಕಿಂತ ಅವರಿಗೆ ಹುಲಿ ಸಿಗದಿದ್ದರೇನಾಯಿತು ಎಂಬ ಸಮಾಧಾನವೂ ನೆಲೆಸಲಾರಂಭಿಸಿರಬೇಕು ಎಂದೆನಿಸಿತು.

ಆದರೂ ನಾನು ಅವರಿಗೆ Cushion effect ನೀಡಲೆಂದು ಆಫ್ರಿಕಾದ ರವಾಂಡಾದ ಕಾಡಿನಲ್ಲಿ ನನಗಾದ ಅನುಭವವನ್ನು ಹೇಳಿದೆ. 'ನನಗೂ ನಿಮ್ಮ ಹಾಗೆ ಆಗಿತ್ತು. ಸುಮಾರು ಐವತ್ತು ಸಾವಿರ ರುಪಾಯಿ ತೆತ್ತು, ರವಾಂಡಾದ ಕಾಡಿಗೆ ಗೊರಿಲ್ಲಾಗಳನ್ನು ನೋಡಲು ಮೊದಲ ಸಲ ಹೋಗಿದ್ದೆ. ಬೆಳಗ್ಗೆ ನಾಲ್ಕೂವರೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ ತನಕ ಆ ದಟ್ಟ ಅರಣ್ಯದಲ್ಲಿ ನಡೆದಾಡಿದರೂ ಗೊರಿಲ್ಲಾಗಳು ಕಂಡಿರಲಿಲ್ಲ. ಆದರೆ ನನಗೆ ಗೊರಿಲ್ಲಾಗಳನ್ನು ನೋಡಲಿಲ್ಲ ಎಂಬ ನಿರಾಸೆ ಆಗಲಿಲ್ಲ. ಕಾರಣ ಆ ಕಾಡು ಭಂಕರವಾಗಿತ್ತು. ನನ್ನ ಜೀವನದಲ್ಲಿ ಐನೂರು ವರ್ಷಗಳ ಪ್ರಾಯದ ಮರಗಳಿಂದ ಆವೃತವಾದ, ಭೀಕರ ಮೌನ ಆವರಿಸಿರುವ ಕಾಡನ್ನು ನೋಡಿರಲೇ ಇಲ್ಲ. ಆ ಮರಗಳ ಕೆಳಗಿನ ಸಸ್ಯಗಳು ಸೂರ್ಯನನ್ನೇ ನೋಡಿರಲಿಕ್ಕಿಲ್ಲ. ಅಂಥ ಗೊಂಡಾರಣ್ಯ! ಅಲ್ಲಿ ನಾನೆಲ್ಲಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ, ಎಲ್ಲಿಂದ ಬಂದೆ.. ಯಾವವೂ ಗೊತ್ತಾಗುತ್ತಿರಲಿಲ್ಲ. ಗೈಡ್ ಇಲ್ಲದೇ ಒಂದು ಹೆಜ್ಜೆ ಇಡುವುದೂ ಅಸಾಧ್ಯವಾದ ಕಾಡು. ಅದು ಅಂಥ ಭೀತಿ ಹುಟ್ಟಿಸುವ ಕಾಡು. ಅಲ್ಲಿ ನಿಮಗೇನಾದರೂ ಆದರೆ, ಕಾಡುಪ್ರಾಣಿಯೇನಾದರೂ ಛಂಗನೆ ಎಳೆದುಕೊಂಡು ಹೋದರೆ, ನಿಮ್ಮ ಸುಳಿವೂ ಸಿಗಲಿಕ್ಕಿಲ್ಲ. ಹೊರ ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಒಂದು ವಾರ ಕಳೆದಿರುತ್ತದೆ. ಆ ಕಾಡಿನಲ್ಲಿ ಕಳೆಯುವ ಕ್ಷಣಕ್ಷಣವೂ ಅಮೂಲ್ಯ, ಅನೂಹ್ಯ. ಗೊರಿಲ್ಲಾ ಕಂಡರೆಷ್ಟು, ಬಿಟ್ಟರೆಷ್ಟು? ನನ್ನ ಜತೆಗೆ, ಗೊರಿಲ್ಲಾಗಳ ಬಗ್ಗೆ ಮೂವತ್ತೈದು ವರ್ಷಗಳ ಕಾಲ ಅಧ್ಯಯನ ಮಾಡಿದ ಅಮೆರಿಕನ್ ದಂಪತಿಗಳಿದ್ದರು. ಅವರನ್ನು ಭೇಟಿ ಮಾಡಿದ್ದು ನನ್ನ ಜೀವನದಲ್ಲಿ ಮರೆಯಾಗದ ಕ್ಷಣ. ಆ ಕಾಡಿನಲ್ಲಿ ಸಿಂಗಳೀಕ ನಮ್ಮನ್ನು ಬೆನ್ನಟ್ಟಿ ಬಂದ ಪ್ರಸಂಗ ನೆನಪಿಸಿಕೊಂಡರೆ ಮೈಚಳಿ ಹುಟ್ಟುತ್ತದೆ. ಇವೆಲ್ಲವನ್ನೂ ಅನುಭವಿಸದೇ ಬರೀ ಗೊರಿಲ್ಲಾಗಳ ಹಿಂದೆ ಬಿದ್ದರೆ ಏನು ಬಂತು? ಗೊರಿಲ್ಲಾ ಒಂದು ನೆಪ. ಆ ನೆಪ ಮುಂದಿಟ್ಟುಕೊಂಡು ನಾನು ಆಫ್ರಿಕಾದ ಕಾಡಿನ ದಟ್ಟ ಅನುಭವ ಪಡೆದುಕೊಂಡೆ. ಮರುದಿನ ಅಲ್ಲಿಗೆ ಹೋದಾಗ ಗೊರಿಲ್ಲಾಗಳ ದರ್ಶನವಾಯಿತು ಅದು ಬೇರೆ ಮಾತು.

ಹಾಗಂತ ನನ್ನ ಸ್ನೇಹಿತರಿಗೆ ಹೇಳಿದೆ. ಅವರ ಮುಖದಲ್ಲಿ ಸಮಾಧಾನದ ಸೆಳಕುಗಳು ಕಾಣಿಸಿಕೊಂಡವು. ಕಾಡನ್ನು ನೋಡಲು, ವನ್ಯಪ್ರಾಣಿಗಳನ್ನು ಕೆಮರಾದಲ್ಲಿ ಸೆರೆ ಹಿಡಿಯಲು ಒಂದು ಮನಸ್ಥಿತಿ ಬೇಕು. ಕಾಡಿನ ಮೇಲೆ ಪ್ರೀತಿ ಇಟ್ಟುಕೊಳ್ಳದೇ, ಕಾಡನ್ನು ಗೌರವಿಸದೇ, ಅದರಲ್ಲಿ ಮನೆ ಮಾಡಿಕೊಂಡಿರುವ ವನ್ಯಜೀವಿಗಳ ಫೋಟೋ ತೆಗೆಯಬಾರದು. ವನ್ಯಜೀವಿಗಳ ಫೋಟೋ ತೆಗೆಯುವುದೆಂದರೆ, ಅವುಗಳ ಸಂರಕ್ಷಣೆಗೆ ಬದ್ಧನಾಗಿದ್ದೇನೆ ಎಂದು ಪ್ರಮಾಣ ಮಾಡಿದಂತೆ. ಈ ಭಾವನೆ ಇಲ್ಲದಿದ್ದರೆ, ಅದೊಂದು ಶುಷ್ಕ ಕ್ರಿಯೆ ಆಗುತ್ತದೆ. ಅಂಥ ಫೋಟೋಗಳಿಗೆ ಮಾನ್ಯತೆ ಇಲ್ಲ. ಅಂಥ ಫೋಟೋಗ್ರಾಫರ್, ಹಕ್ಕಿಗಳಿಗೆ ಕಲ್ಲಿನಲ್ಲಿ ಹೊಡೆದು, ಅವು ಹಾರುವ ದೃಶ್ಯವನ್ನು ಸೆರೆ ಹಿಡಿವ ಪಡಪೋಶಿಯಂತೆ ಕಾಣುತ್ತಾನೆ ಎಂದೆ.

ನನ್ನ ಸ್ನೇಹಿತರು ಮಾತಾಡಲಿಲ್ಲ. ನಾನೂ ಮುಂದುವರಿಸಲಿಲ್ಲ.

If you don't know where you are going, any road will get you there ! 12/03/2024

ನೀವು ಎಲ್ಲಿಗೆ ಹೋಗುತ್ತೀರಿ ಎಂಬುದು ಗೊತ್ತಿಲ್ಲದಿದ್ದರೆ, ಯಾವ ರಸ್ತೆಯಾದರೂ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಬಹುದು!

If you don't know where you are going, any road will get you there ! Life is one big road with lots of signs. So when you riding through the ruts, don't complicate your mind. Flee from hate, mischief and jealousy. Don't bury y...

Photos from Vishweshwar Bhat's post 12/03/2024

ಕೊಂಡು ಓದಿದ ಎಲ್ಲ ಅಕ್ಷರಸ್ನೇಹಿತರಿಗೆ ವಂದನೆಗಳು! 🙏

Videos (show all)